ಖಾಸಗಿ ಟ್ರಸ್ಟ್ ಗೆ ಸಂಬಂದಿಸಿದ ವಿಜಯಪುರದ ಐವತ್ತಕ್ಕೂ ಹೆಚ್ಚು ದೇವಾಲಯಗಳ ಆಸ್ತಿಯ ದಾಖಲೆಯಲ್ಲಿ ಮುಜರಾಯಿ ಎಂದು ನಮೂದಿಸಲು ಸರ್ಕಾರ ಮುಂದಾಗಿದ್ದು, ಕೂಡಲೇ ನಿರ್ಣಯವನ್ನು ಹಿಂಪಡೆಯುವಂತೆ ಒತ್ತಾಯಿಸಿ ಮಾಜಿ ಸಚಿವ ಅಪ್ಫಾಸಾಹೇಬ ಪಟ್ಟಣಶೆಟ್ಟಿ ನೇತೃತ್ವದಲ್ಲಿ ಮಂಗಳವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಇದೇ ವೇಳೆ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ,ವಿಜಯಪುರದ ವಿವಿಧ ಖಾಸಗಿ ಟ್ರಸ್ಟ್ ಹಾಗೂ ಸಮಿತಿಗಳಿಗೆ ಸೇರಿದ ದೇವಾಲಯಗಳನ್ನೂ ಮುಜರಾಯಿ ಇಲಾಖೆ ತನ್ನ ಅಧೀನಕ್ಕೆ ಪಡೆದುಕೊಳ್ಳುತ್ತಿರುವುದು ತಿಳಿದು ಬಂದಿದೆ, ದೇವಾಲಯಕ್ಕೆ ಸೇರಿದ ಆಸ್ತಿಗಳನ್ನು ಮುಜರಾಯಿ ಇಲಾಖೆ ಎಂದು ಉತಾರೆಗಳಲ್ಲಿ ನಮೂದಿಸುವ ನಿಟ್ಟಿನಲ್ಲಿ ಪ್ರಸ್ತಾವನೆ ಸಲ್ಲಿಕೆಯಾಗಿದೆ, ಇದು ಸರಿಯಾದ ಕ್ರಮವಲ್ಲ ಎಂದರು. ವಿಜಯಪುರ ಜಿಲ್ಲೆಯ 50ಕ್ಕೂ ಹೆಚ್ಚು ದೇವಾಲಯಗಳಿಗೆ ಸಂಬಂಧಿಸಿದಂತೆ ತಹಶೀಲ್ದಾರರು ಪಾಲಿಕೆ ಆಯುಕ್ತರಿಗೆ ಈ ಖಾಸಗಿ ದೇವಾಲಯಗಳ ಆಸ್ತಿಗಳಲ್ಲಿ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಕರ್ನಾಟಕ ಸರ್ಕಾರ ಎಂದು ನಮೂದಿಸಲು ತಿಳಿಸಿರುವುದು ಬೆಳಕಿಗೆ ಬಂದಿದೆ. ಈ ಎಲ್ಲ ದೇವಾಲಯಗಳು ಖಾಸಗಿ ದೇವಾಲಯಗಳು ಎಂದೇ ಪ್ರಸಿದ್ದಿ ಪಡೆದಿವೆ, ಈ ಎಲ್ಲ ದೇವಾಲಯಗಳು ಟ್ರಸ್ಟ್ ಅಡಿಯಲ್ಲಿಯೇ ನಿರ್ವಹಣೆಯಾಗುತ್ತಿವೆ, ಸರ್ಕಾರದಿಂದ ಯಾವೊಂದು ಅನುದಾನ ಪಡೆಯದೇ ನಡೆಯುತ್ತಿವೆ, ಈ ಎಲ್ಲ ವಾಸ್ತವ ಸಂಗತಿ ಗೊತ್ತಿದ್ದರೂ ಸಹ ವೈಯಕ್ತಿಕ ಹಿತಾಸಕ್ತಿಯಿಂದ ದೇವಾಲಯಗಳ ಖಾಸಗಿ ಆಸ್ತಿಗಳನ್ನು ಹಿಂದು ಧಾರ್ಮಿಕ ದತ್ತಿ ಇಲಾಖೆ ಅಡಿ ತಂದು ದೇವಾಲಯಗಳ ಮಾಲಿಕರಿಗೆ ತೊಂದರೆ ನೀಡಿ ಅವರ ಆಸ್ತಿ ಕಬಳಿಸುವ ಷಡ್ಯಂತ್ರ ನಡೆದಿದೆ ಎಂದು ಗಂಭೀರವಾಗಿ ಆರೋಪಿಸಿದರು. ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಅಧಿನಿಯಮ 1997ರ ಅಡಿಯಲ್ಲಿ ಯಾವುದೇ ಖಾಸಗಿ ದೇವಾಲಯಗಳು ಹಾಗೂ ಟ್ರಸ್ಟ್ ಅಡಿಯಲ್ಲಿ ಪಡೆಯಬೇಕಾದಲ್ಲಿ ಅದಕ್ಕೆ ಯಾವುದಾದರೂ ಸರ್ಕಾರದಿಂದ ಅನುದಾನ ಪಡೆಯುತ್ತಿರಬೇಕು ಹಾಗೂ ಸರ್ಕಾರದ ವತಿಯಿಂದ ಅದರ ದಿನಚರಿಗೆ ಸಹಾಯ ವಾಗುತ್ತಿರಬೇಕು. ಆದರೆ ವಿಜಯಪುರದಲ್ಲಿ ಉದ್ದೇಶಿತ ದೇವಾಲಯಗಳು ಈ ವ್ಯಾಪ್ತಿಗೆ ಬರುವುದಿಲ್ಲ, ಈ ಬಗ್ಗೆ ನ್ಯಾಯಾಲಯ ಸಹ ಸ್ಪಷ್ಟನೆ ನೀಡಿದೆ, ಖಾಸಗಿ ಟ್ರಸ್ಟ್ ಧಾರ್ಮಿಕ ಸ್ವಾತಂತ್ರ್ಯ ಮತ್ತು ಆಡಳಿತ ಹಸ್ತಕ್ಷೇಪ ವಾಗಿದ್ದು ಸರ್ಕಾರ ಕೂಡಲೇ ಈ ಪ್ರಕ್ರಿಯೆ ನಿಲ್ಲಿಸಬೇಕು, ಇಲ್ಲವಾದರೆ ಹೋರಾಟವನ್ನು ಚುರುಕುಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಇದೇಸಂದರ್ಭದಲ್ಲಿ ವಿಡಿಎ ಮಾಜಿ ಅಧ್ಯಕ್ಷ ಭೀಮಾಶಂಕರ ಹದನೂರ, ಮಾಜಿ ಉಪಮೇಯರ್ ಗೋಪಾಲ ಘಟಕಾಂಬಳೆ, ಈರಣ್ಣ ಪಟ್ಟಣಶೆಟ್ಟಿ, ಪ್ರಭಾಕರ್ ಬೋಸಲೆ, ವಿಜಯ್ ಕೋರಳ್ಳಿ, ರವಿ ಕಲ್ಲೂರ, ಬಸವರಾಜ ತೊನಶ್ಯಾಳ, ರಾಜು ಬಿರಾದಾರ, ಸಂದೀಪ್ ಪಾಟೀಲ್, ಜಗದೀಶ್ ಮುಚ್ಚಂಡಿ, ಬಸವರಾಜ್ ಹಳ್ಳಿ, ಶ್ರೀಕಾಂತ್ ಶಿಂಧೆ, ರಾಜೇಶ್ ತಾವಸೆ, ಸಂಪತ್ ಕೋವಳ್ಳಿ, ವಿಜಯ್ ಹಿರೇಮಠ, ವಿವೇಕ್ ತಾವರಗೇರಿ, ಸತೀಶ ಪಾಟೀಲ, ಸಾಗರ ಅಡಕಿ ಸೇರಿದಂತೆ ಮತ್ತಿತರರಿದ್ದರು.



