ಶತಮಾನದ ಇತಿಹಾಸ ಹೊಂದಿರುವ ಬಿ.ಎಲ್.ಡಿ.ಈ ಸಂಸ್ಥೆಯ ಕೆಲಸ ಕಾರ್ಯಗಳು ಶಿಕ್ಷಣ, ಆರೋಗ್ಯ ಮತ್ತು ಸಮಾಜ ಸೇವೆಯ ಮೂಲಕ ಜನಮಾನಸದಲ್ಲಿ ನೆಲೆಸಿವೆ. ಸಂಸ್ಥೆಯ ಅಧ್ಯಕ್ಷರಾದ ಎಂ.ಬಿ.ಪಾಟೀಲರವರ ನೇತೃತ್ವ, ದೂರದೃಷ್ಟಿ ಮತ್ತು ಪ್ರಧಾನ ಕಾರ್ಯದರ್ಶಿಗಳಾದ ಸುನೀಲಗೌಡ ಪಾಟೀಲ ಅವರ ಮಾರ್ಗದರ್ಶನದಲ್ಲಿ ಸಂಸ್ಥೆ ಉತ್ತರೋತ್ತರವಾಗಿ ಅಭಿವೃದ್ಧಿ ಪಥದಲ್ಲಿ ಸಾಗಿದೆ ಎಂದು ಬಿ.ಎಲ್.ಡಿ.ಈ ಹೈಟೆಕ್ ಆಸ್ಪತ್ರೆ ಆಡಳಿತಾಧಿಕಾರಿಗಳಾದ ಡಾ. ಸಂಜಯ ಕಡ್ಲಿಮಟ್ಟಿ ತಿಳಿಸಿದರು.
ವಿಜಯಪುರ ನಗರದ ಬಿ.ಎಲ್.ಡಿ.ಈ ಸಂಸ್ಥೆಯ ಎ.ವಿ.ಎಸ್ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಕೆಲವೇ ವರ್ಷಗಳ ಹಿಂದೆ ಮುಚ್ಚುವ ಹಂತದಲ್ಲಿದ್ದ ಎ.ವಿ.ಎಸ್ ಆಯುರ್ವೇದ ಕಾಲೇಜನ್ನು ಬಿ.ಎಲ್.ಡಿ.ಈ ಸಂಸ್ಥೆ ತನ್ನ ವ್ಯಾಪ್ತಿಗೆ ತೆಗೆದುಕೊಂಡ ನಂತರ ಇಲ್ಲಿ ಸಾಕಷ್ಟು ಬದಲಾವಣೆಯಾಗಿದ್ದು, ಅಷ್ಟೇ ಅಲ್ಲದೆ ಕರ್ನಾಟಕದ ಪ್ರತಿಷ್ಠಿತ ಆಯುರ್ವೇದ ಕಾಲೇಜು ಎಂದು ಖ್ಯಾತಿ ಪಡೆದಿದೆ. ಈಗ ಇಲ್ಲಿ ಸುಸಜ್ಜಿತ ಹೈಟೆಕ್ ಆಯುರ್ವೇದ ಆಸ್ಪತ್ರೆ ಕಳೆದ ಜುಲೈ 27 ರಂದು ಪ್ರಾರಂಭವಾಗಿದ್ದು, ರೋಗಿಗಳ ಪಾಲಿಗೆ ವರದಾನವಾಗಿದೆ. ಇಲ್;ಳಿಗೆ ದೇಶದ ನಾನಾ ರಾಜ್ಯಗಳಿಂದ ಮಾತ್ರವಲ್ಲ ವಿದೇಶಗಳಿಂದಲೂ ರೋಗಿಗಳು ಚಿಕಿತ್ಸೆಗಾಗಿ ಆಗಮಿಸುತ್ತಿದ್ದಾರೆ. ಬೇರೆ ಚಿಕಿತ್ಸೆಗಳಲ್ಲಿ ಗುಣವಾಗದ ಕಾಯಿಲೆಗಳಿಗೆ ನಮ್ಮಲ್ಲಿರುವ ಅತ್ಯುತ್ತಮ ಆಯುರ್ವೇದ ಚಿಕಿತ್ಸೆಗಳು ರೋಗಿಗಳಿಗೆ ಸಂಜೀವಿನಿಯಾಗಿವೆ. ಈ ಹಿಂದೆ 2018 ರಲ್ಲಿ ಇದೇ ರೀತಿ ಅಮೆರಿಕಾ, ರಷ್ಯಾ, ಯುಕ್ರೇನ್ ಮತ್ತು ಪೆರು ದೇಶಗಳಿಂದ ಸುಮಾರು 6 ಜನ ವಿದೇಶಿಗರು ಆಯುರ್ವೇದ ಚಿಕಿತ್ಸೆಗಾಗಿ ಇದೇ ಆಸ್ಪತ್ರೆಗೆ ಬಂದಿದ್ದರು. ಈಗ ಪೆರು ದೇಶದ ಬೋರಿಸ್ ವೆರಾ ಎಂಬಾತನಿಗೆ ಸೊಂಟದ ಸಂಧುಗಳ ಎಲುವಿನ ರಕ್ತಹೀನತೆ ಉಂಟಾಗಿದ್ದು ಇದಕ್ಕೆ ಅಲ್ಲಿನ ವೈದ್ಯರು ಟೋಟಲ್ ಹಿಪ್ ರಿಪ್ಲೇಸಮೆಂಟ್ ಎಂಬ ಶಸ್ತ್ರಚಿಕಿತ್ಸೆಯನ್ನು ಸೂಚಿಸಿದ್ದರು. ಅದಕ್ಕೆ ಒಪ್ಪದ ಬೋರಿಸ್ ಪರ್ಯಾಯ ಮಾರ್ಗಗಳನ್ನು ಹುಡುಕಿ ನಮ್ಮ ಆಯುರ್ವೇದ ಚಿಕಿತ್ಸೆಯ ಬಗ್ಗೆ ತಿಳಿದುಕೊಂಡರು. ನಂತರ ಪೆರು ದೇಶದಲ್ಲಿನ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ ಆಯುರ್ವೇದ ಚಿಕಿತ್ಸೆಗಾಗಿ ವಿಜಯಪುರಕ್ಕೆ ಬಂದರು. ಅವರು ಪ್ರಥಮ ಬಾರಿಗೆ ಇಲ್ಲಿಗೆ ಬಂದಾಗ ಎರಡು ಬಗಲಿನಲ್ಲಿ ಬಡಗೆ ಹಿಡಿದುಕೊಂಡು ನಡೆದಾಡುತ್ತಿದ್ದರು. ಚಿಕಿತ್ಸೆ ನಂತರ ಯಾವುದೇ ಊರುಗೋಲಿನ ಸಹಾಯವಿಲ್ಲದೆ ನಡೆದಾಡುತ್ತಿದ್ದಾರೆ. ಮೊನ್ನೆಯಷ್ಟೇ ಉಪ್ಪಲಿ ಬುರುಜ್ ನ್ನು ನಿರಾಯಾಸವಾಗಿ ಹತ್ತಿ ಇಳಿದಿದ್ದಾರೆ. ಇಲ್ಲಿ ನೀಡಲಾದ ಚಿಕಿತ್ಸೆಯಿಂದಾಗಿ ಅವರು ಗುಣಮುಖರಾಗಿದ್ದು ಸಂತೋಷದಿಂದ ತಮ್ಮ ದೇಶಕ್ಕೆ ಮರಳುತ್ತಿದ್ದಾರೆ. ಇದಷ್ಟೇ ಅಲ್ಲ ನಮ್ಮ ಆಸ್ಪತ್ರೆಯಲ್ಲಿ ಪ್ರತಿನಿತ್ಯ ಸುಮಾರು 30ಕ್ಕೂ ಹೆಚ್ಚು ಜನರಿಗೆ ‘ಪಂಚಕರ್ಮ ಚಿಕಿತ್ಸೆ’ ನೀಡಲಾಗುತ್ತಿದೆ. ಚರ್ಮರೋಗ, ಮೂಲವ್ಯಾದಿ, ಎಲಬು ಮತ್ತು ಕೀಲು ನೋವು ಸೇರಿದಂತೆ ನಾನಾ ಕಾಯಿಲೇಗಳಿಗೆ ಅತ್ಯುತ್ತಮ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು.




