ವಿಜಯಪುರ ಜಿಲ್ಲೆಯಲ್ಲಿ ಒತ್ತುವರಿಯಾದ ಸ್ಮಶಾನ ಭೂಮಿಗಳನ್ನು ಸಂಬಂಧಿಸಿದ ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್, ಪುರಸಭೆ, ನಗರಸಭೆ ಜವಾಬ್ದಾರಿಯಾಗಿದ್ದು. ಒತ್ತುರಿಯಾಗಿರುವ ಸ್ಮಶಾನ ಭೂಮಿ ತೆರವುಗೊಳಿಸಿ ಸಂರಕ್ಷಣೆಗೆ ಅಗತ್ಯ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಆನಂದ ಕೆ.ಸೂಚನೆ ನೀಡಿದರು. ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ದೌರ್ಜನ್ಯ ನಿಯಂತ್ರಣ ಪ್ರತಿಬಂಧ ಕಾಯ್ದೆಯಡಿ ರಚಿತವಾದ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಒತ್ತುವರಿಯಾಗಿರುವ ಸ್ಮಶಾನ ಭೂಮಿಗಳನ್ನು ತೆರವುಗೊಳಿಸುವುದು ಸಂಬಂಧಿಸಿದ ಇಲಾಖೆಗಳ ಜವಾಬ್ದಾರಿಯಾಗಿದೆ ಹಾಗೂ ಸಂರಕ್ಷಣೆ ಮಾಡುವುದು ಎಲ್ಲ ಇಲಾಖೆಗಳ ಜವಾಬ್ದಾರಿಯಾಗಿದ್ದು, ಇದನ್ನರಿತು ಅಧಿಕಾರಿಗಳು ತೆರವುಗೊಳಿಸಿ, ನಂತರ ಸುತ್ತಲೂ ಕಂಪೌಂಡ್ವನ್ನು ನಿರ್ಮಿಸುವ ಮೂಲಕ ಸ್ಮಶಾನ ಭೂಮಿ ಸಂರಕ್ಷಣೆಗೆ ಕ್ರಮ ವಹಿಸಬೇಕು. ಜಿಲ್ಲೆಯಲ್ಲಿ ಒತ್ತುವರಿಯಾದ ಸ್ಮಶಾನಗಳನ್ನು ತೆರವುಗೊಳಿಸದೇ ಇದ್ದಲ್ಲಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ವಹಿಸಲಾಗುವುದು ಎಂದು ಹೇಳಿದರು. ಗ್ರಾಮ ಪಂಚಾಯತ್ ಮತ್ತು ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಕಾನೂನಿನ ಪ್ರಕಾರ ತೆರಿಗೆ ಸಂಗ್ರಹದಲ್ಲಿ ಶೇ.25 ರಷ್ಟು ಎಸ್ಸಿಪಿ-ಟಿಎಸ್ಪಿ ಅನುದಾನವನ್ನು ಮೀಸಲಿಟ್ಟು, ವಾರ್ಷಿಕ ಕ್ರೀಯಾಯೋಜನೆ ಮಾಡಿಕೊಂಡು ಎಸ್ಸಿ-ಎಸ್ಟಿ ಫಲಾನುಭವಿಗಳಿಗೆ ಈ ಅನುದಾನ ಸದ್ಬಳಕೆ ಮಾಡಬೇಕು. ಕಾನೂನಿನ್ವಯ ಶೇ.25ರಷ್ಟು ಅನುದಾನ ಮೀಸಲಿಡುವುದು ಕಡ್ಡಾಯವಾಗಿದ್ದು, ಈ ಅನುದಾನ ಬೇರೆ ಉದ್ದೇಶಕ್ಕೆ ಬಳಕೆಯಾಗದಂತೆ ನಿಗಾವಹಿಸುವಂತೆ ಸೂಚನೆ ನೀಡಿದರು.




