ವಿಜಯಪುರ ಜಿಲ್ಲೆಯಾದ್ಯಂತ ಇರುವ ಶಾಲಾ-ಕಾಲೇಜ್ ಆವರಣದ 100 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ತಂಬಾಕು ಉತ್ಪನ್ನಗಳ ಮಾರಾಟವಾಗದಂತೆ ನಿಗಾವಹಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಆನಂದ.ಕೆ ಸೂಚನೆ ನೀಡಿದರು. ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ತಂಬಾಕು ನಿಯಂತ್ರಣಾ ಕಾರ್ಯಕ್ರಮದ 2025-26ನೇ ಸಾಲಿನ ಎರಡನೇ ಜಿಲ್ಲಾ ಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಶಾಲೆಯ ಮುಖ್ಯೋಪಾಧ್ಯಾಯರು ಸೇರಿದಂತೆ ಸಮಿತಿಯವರು ಕೊಟ್ಟಾ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ತಂಬಾಕು ಉತ್ಪನ್ನಗಳ ಉಪಯೋಗದಿಂದ ದುಷ್ಪರಿಣಾಮ ಹಾಗೂ ಕಾಯ್ದೆಯ ಅರಿವು ಮೂಡಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಅವರು ಸೂಚನೆ ನೀಡಿದರು.

ಜಿಲ್ಲೆಯಲ್ಲಿ ತಂಬಾಕು ಉತ್ಪನ್ನಗಳ ನಿಯಂತ್ರಣಕ್ಕೆ ತನಿಖಾ ದಳಗಳನ್ನು ರಚಿಸಿಕೊಂಡು ಕ್ರೀಯಾಶೀಲತೆಯಿಂದ ಕಾಲ ಕಾಲಕ್ಕೆ ದಾಳಿ ನಡೆಸಬೇಕು.ಎಲ್ಲ ಶಾಲೆಗಳಲ್ಲಿ ಆಗಾಗ ಪಾಲಕರ ಸಭೆ ಜರುಗಿಸಿ,ಮಾಹಿತಿ ನೀಡಬೇಕು. ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ತಂಬಾಕು ಉತ್ಪನ್ನಗಳ ಬಳಕೆಯಿಂದಾಗುವ ದುಷ್ಪರಿಣಾಮಗಳ ಕುರಿತು ಸೂಕ್ತ ತಿಳುವಳಿಕೆ, ಅರಿವು ಮೂಡಿಸುವಂತೆ ಶಾಲಾ ಶಿಕ್ಷಣ ಸಂಸ್ಥೆಗಳು ತಂಬಾಕು ಮುಕ್ತ ಶಿಕ್ಷಣ ಸಂಸ್ಥೆಯ ಮಾರ್ಗಸೂಚಿಗಳನ್ನು ದಾಖಲಿಸಬೇಕು. ಕೋಟ್ಟಾ ಕಾಯ್ದೆಯನ್ನು ಉಲ್ಲಂಘಿಸುವ ಅಂಗಡಿಗಳ ಮಾಲೀಕರಿಗೆ ಒಂದು ಬಾರಿ ದಂಡ ವಿಧಿಸಿ ಸೂಕ್ತ ತಿಳುವಳಿಕೆ ನೀಡಿ.ಇದು ಪುನರಾವರ್ತಿವಾಗಿರುವುದು ಕಂಡು ಬಂದರೆ ಟ್ರೇಡ್ ಲೈಸೆನ್ಸ್ನ್ನು ರದ್ದುಪಡಿಸಲು ಗ್ರಾಮ ಪಂಚಾಯತಿ ಹಾಗೂನಗರ ಸ್ಥಳೀಯ ಸಂಸ್ಥೆಗಳು ಕ್ರಮವಹಿಸಬೇಕು.ಪ್ರತಿ ಶೈಕ್ಷಣಿಕ ಸಂಸ್ಥೆಗಳಲ್ಲಿ ಕೋಟ್ಟಾ ಕಾಯ್ದೆಯ ಸೆಕ್ಸೆನ-4 ಹಾಗೂ ಸೆಕ್ಸೆನ್-6ಬಿ ರನ್ವಯ ನಾಮಫಲಕದ ಗೋಡೆ ಬರಹ ಬರೆಸಬೇಕು. ನಾಮಫಲಕವನ್ನು ಶಾಲಾ,ಕಾಲೇಜಿನ ಪ್ರಮುಖ ಸ್ಥಳದಲ್ಲಿ ಹಾಗೂ ಪ್ರವೇಶ ದ್ವಾರದಲ್ಲಿ ಅಳವಡಿಸಬೇಕು.ಶಾಲಾ ಕಾಲೇಜುನಲ್ಲಿ ತಂಬಾಕು ನಿಯಂತ್ರಣ ಸಮಿತಿ ರಚಿಸಿಕೊಂಡು ನಿಯಮಗಳ ಕಟ್ಟು ನಿಟ್ಟಿನ ಅನುಷ್ಟಾನವಾಗುವಂತೆ ನೋಡಿಕೊಳ್ಳಬೇಕು.ಕೋಟ್ಟಾ ಕಾಯ್ದೆಯ ಮಾಹಿತಿ ಶಾಲಾ ಕಾಲೇಜಿನಲ್ಲಿ ಲಭ್ಯವಿರಬೇಕು.ತಂಬಾಕು ಉತ್ಪನ್ನ ಮಾರಾಟ ಮಾಡುವ ಅಂಗಡಿಗಳು ಕೊಟ್ಟಾ ಕಾಯ್ದೆಯನ್ವಯ ನಾಮಫಲಕ ಅಳವಡಿಸಿರುವುದನ್ನು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ತಂಡ ರಚಿಸಿಕೊಂಡು ಆಗಾಗ ದಾಳಿ ಮಾಡಿ,ಪರಿಶೀಲನೆ ನಡೆಸಬೇಕು ಎಂದು ಹೇಳಿದರು.




