ವಿಜಯಪುರ ನಗರದಲ್ಲಿ ರಸ್ತೆ ಸಂಪೂರ್ಣ ಅವ್ಯವಸ್ಥೆಯಿಂದ ಕೂಡಿದ್ದು, ರಾಜ್ಯ ಸರ್ಕಾರ ರಸ್ತೆ ಅಭಿವೃದ್ಧಿ ವಿಷಯದಲ್ಲಿ ಬೇಜವಾಬ್ದಾರಿತನ ಪ್ರದರ್ಶಿಸುತ್ತಿರುವುದನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಅಥಣಿ ರಸ್ತೆಯನ್ನ ತಡೆ ಮಾಡಿ ಗುಂಡಿಗಳಲ್ಲಿ ಸಸಿಗಳನ್ನು ನೆಡುವ ಮೂಲಕ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ಪ್ರವಾಸಿ ಮಂದಿರದ ಮುಂಭಾಗದಲ್ಲಿ ಅಥಣಿ ರಸ್ತೆಗೆ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ರಸ್ತೆ ತಡೆ ನಡೆಸಿ ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚುವಂತೆ ಆಗ್ರಹಿಸಿದರು. ಕಾಂಗ್ರೆಸ್ ಸರ್ಕಾರ – ಜೀವಕ್ಕೆ ಸಂಚಾರ, ಗುಂಡಿ ಮುಚ್ಚದೇ ರಾಜ್ಯದ ಜನತೆ ಹಾಳು ಮಾಡಿದ ಸರ್ಕಾರಕ್ಕೆ ಧಿಕ್ಕಾರ, ಗುಂಡಿಗಳ ಜನಕ ಡಿ.ಕೆ. ಶಿವಕುಮಾರ ಎಂಬ ಪ್ಲೇಕಾರ್ಡ್ಗಳನ್ನು ಪ್ರದರ್ಶಿಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.

ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪೂರ ಮಾತನಾಡಿ, ರಾಜ್ಯ ಸರ್ಕಾರ ಒಂದೇ ಒಂದು ಸುಸಜ್ಜಿತ ರಸ್ತೆ ನಿರ್ಮಿಸಿಲ್ಲ, ರಸ್ತೆಗಳ ಅವ್ಯವಸ್ಥೆ ಖಂಡಿಸಿ ಅನೇಕ ಉದ್ಯಮಗಳು ರಾಜ್ಯ ಬಿಟ್ಟು ಹೋಗುತ್ತೇವೆ ಎಂದು ಹೇಳಿದರೆ, ನಮ್ಮ ಉಪಮುಖ್ಯಮಂತ್ರಿಗಳು ಇದನ್ನು ಬ್ಲಾಕ್ ಮೇಲ್ ಎಂದು ಕರೆದರು, ರಸ್ತೆ ನಿರ್ಮಿಸಿಕೊಡಿ ಎಂದು ಹೇಳುವುದು ಬ್ಲಾಕ್ ಮೇಲ್ ಎಂದಾದರೇ ಹೇಗೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರದ ಈ ನೀತಿಯಿಂದಾಗಿಯೇ ಅನೇಕ ಕಂಪನಿಗಳು ನಮ್ಮ ರಾಜ್ಯ ಬಿಟ್ಟು ಹೋಗುತ್ತಿವೆ, ಇದರಿಂದ ನಮ್ಮ ಉದ್ಯೋಗಗಳಿಗೆ ದೊಡ್ಡ ಹೊಡೆತ ಬೀಳುತ್ತಿದೆ, ಗುಂಡಿಗಳನ್ನು ಮುಚ್ಚಿ ಸುಸಜ್ಜಿತ ರಸ್ತೆ ಮಾಡಬೇಕಾದ ಸರ್ಕಾರ ಆ ವಿಷಯದಲ್ಲಿಯೂ ದರ್ಪ ತೋರಿ ಬಿಟ್ಟು ಹೋಗುವುದಾದರೆ ಬಿಟ್ಟು ಹೋಗಿ ಎಂದು ಉದ್ಯಮ ಸಂಸ್ಥೆಗಳಿಗೆ ಹೇಳುವ ಮೂಲಕ ಬೇಜವಾಬ್ದಾರಿ ಪ್ರದರ್ಶಿಸಿದೆ, ಇದೊಂದು ನಿರ್ಲಜ್ಜ ಸರ್ಕಾರ, ರಸ್ತೆ ಕೇಳಿದರೆ ಬ್ಲಾಕ್ ಮೇಲ್ ಎಂದು ಹೇಳುವ ಕೆಟ್ಟ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಸಂಸದ ರಮೇಶ ಜಿಗಜಿಣಗಿ, ಮಾಜಿ ಸಚಿವ ಅಪ್ಫಾಸಾಹೇಬ ಪಟ್ಟಣಶೆಟ್ಟಿ, ಮುಖಂಡರಾದ ಚಂದ್ರಶೇಖರ ಕವಟಗಿ, ಉಮೇಶ್ ಕಾರಜೋಳ, ಗೋಪಾಲ್ ಘಟಕಾಂಬಳೆ, ಚಿದಾನಂದ್ ಛಲವಾದಿ, ಮಳುಗೌಡ ಪಾಟೀಲ, ಮಲ್ಲಿಕಾರ್ಜುನ ಜೋಗುರ, ಎಸ್.ಎ. ಪಾಟೀಲ, ಡಾ.ಸುರೇಶ ಬಿರಾದಾರ, ಉಮೇಶ್ ಕೊಳಕುರ, ಬಸವರಾಜ್ ಭೈಚಭಾಳ, ರಾಜೇಶ ತಾವಸೆ, ಭೀಮಾಶಂಕರ್ ಹದನೂರ, ರಾಹುಲ್ ಜಾಧವ, ವಿಜಯ ಜೋಶಿ, ರವಿ ಬಿರಾದಾರ, ಭೀಮು ಸಾರವಾಡ, ಸ್ವಪ್ನಾ ಕಣಮುಚನಾಳ, ಮಲ್ಲಮ್ಮ ಜೋಗೂರ, ಗೀತಾ ಚೌಧರಿ, ಸುಷ್ಮಿತಾ ವಾಡಕರ, ರಾಜೇಶ್ವರಿ ಅವಟಿ, ಸಂಪತ್ ಕೋವಳ್ಳಿ, ಶಿವಾನಂದ ಮಖಣಾಪೂರ ಪಾಲ್ಗೊಂಡಿದ್ದರು.



