
ಖಾಯಂ ಜನತಾ ನ್ಯಾಯಾಲಯದ ಸದುಪಯೋಗ ಪಡೆದುಕೊಂಡು ನೆಮ್ಮದಿ ಜೀವನ ನಡೆಸುವಂತೆ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಹರೀಶ ಎ.ಕರೆ ನೀಡಿದರು. ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ವಿಜಯಪುರ, ಖಾಯಂ ಜನತಾ ನ್ಯಾಯಾಲಯ ಕಲ್ಬುರ್ಗಿ, ಜಿಲ್ಲಾ ನ್ಯಾಯಾಂಗ ಇಲಾಖೆ, ಜಿಲ್ಲಾ ನ್ಯಾಯವಾದಿಗಳ ಸಂಘ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಇವರ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡ ಖಾಯಂ ಜನತಾ ನ್ಯಾಯಾಲಯದ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಖಾಯಂ ಜನತಾ ನ್ಯಾಯಾಲಯ ಮುಖ್ಯವಾಗಿ ಸಾರ್ವಜನಿಕ ಉಪಯುಕ್ತ ಸೇವೆಗಳಿಗೆ. ವಿವಾದಗಳನ್ನು ಹಾಗೂ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಖಾಯಂ ಜನತಾ ನ್ಯಾಯಾಲಯ ಪ್ರಮುಖ ಪಾತ್ರ ವಹಿಸುತ್ತದೆ. ಪ್ರಯಾಣಿಕರನ್ನು ಅಥವಾ ಸರಕು ಸಾಗಾಣೆ ಮಾಡುವ ಭೂಸಾರಿಗೆ, ಜಲಸಾರಿಗೆ ಹಾಗೂ ವಾಯು ಸಾರಿಗೆ ಸೇವೆಗಳು, ಅಂಚೆ, ತಂತಿ ಹಾಗೂ ದೂರವಾಣಿ ಸೇವೆಗಳು, ವಿದ್ಯುತ್, ಬೆಳಕು, ನೀರು ಸರಬರಾಜು ಮಾಡುವ ಯಾವುದೇ ಸಂಸ್ಥೆಗಳ ಸೇವೆಗಳ, ಸಾರ್ವಜನಿಕ ನೈರ್ಮಲ್ಯ ವ್ಯವಸ್ಥೆ, ಚರಂಡಿ ವ್ಯವಸ್ಥೆ ಕಾರ್ಯಗಳು ವಿಮಾ ಸೇವೆಗಳು, ಆಸ್ಪತ್ರೆ ಅಥವಾ ಔಷಧಾಲಯ ಸೇವೆಗಳು, ಬ್ಯಾಂಕ್ ಸೇರಿದಂತೆ ಹಣಕಾಸು ಸಂಸ್ಥೆಗಳಿಗೆ ಸಂಬಂಧಪಟ್ಟ ಪ್ರಕರಣಗಳು, ಶಿಕ್ಷಣ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಿಸಿದ ಸೇವೆಗಳು, ಗೃಹ ಮತ್ತು ರಿಯಲ್ ಎಸ್ಟೇಟ್ ಸಂಬಂಧಪಟ್ಟ ಸೇವೆಗಳಲ್ಲಿ ಯಾವುದೇ ಸಮಸ್ಯೆಗಳಿದ್ದಲ್ಲಿ ಅರ್ಜಿಯನ್ನು ನೇರವಾಗಿ ಅಥವಾ ವಕೀಲರ ಮೂಲಕ ಖಾಯಂ ನ್ಯಾಯಾಲಯಕ್ಕೆ ಸಲ್ಲಿಸಿ ಯಾವುದೇ ಶುಲ್ಕವಿಲ್ಲದೇ ಪರಿಹಾರ ಕಂಡು ಕೊಳ್ಳಬಹುದಾಗಿದೆ. ರಾಜ್ಯದಲ್ಲಿ ಒಟ್ಟು 6 ಖಾಯಂ ಜನತಾ ನ್ಯಾಯಾಲಯಗಳಿದ್ದು, ಜಿಲ್ಲೆಯು ಕಲ್ಬುರ್ಗಿಯ ಖಾಯಂ ಜನತಾ ನ್ಯಾಯಾಲಯಕ್ಕೆ ಒಳಪಡುತ್ತದೆ. ಕಲ್ಬುರ್ಗಿ ವ್ಯಾಪ್ತಿಯಲ್ಲಿ ಕಲ್ಬುರ್ಗಿ, ಬೀದರ, ರಾಯಚೂರು, ಯಾದಗಿರ ಹಾಗೂ ವಿಜಯಪುರ ಜಿಲ್ಲೆ ಒಳಪಡುತ್ತದೆ. ಜನತಾ ನ್ಯಾಯಾಲಯದಲ್ಲಿ ಒಂದು ಕೋಟಿ ರೂ. ಒಳಗಿನ ವ್ಯಾಜ್ಯಗಳ ಪ್ರಕರಣಗಳನ್ನು ಸಮಸ್ಯೆಗಳನ್ನು ದಾಖಲಿಸಬಹುದಾಗಿದೆ. ಪ್ರಕರಣಗಳನ್ನು ದಾಖಲು ಮಾಡುವ ಅರ್ಜಿದಾರರಿಗೆ ಯಾವುದೇ ಆದಾಯಮಿತಿ ಇರುವುದಿಲ್ಲ. ಜನತಾ ನ್ಯಾಯಾಲಯದಲ್ಲಿ ದಾಖಲಿಸುವ ಪ್ರಕರಣ ಬೇರೆ ಯಾವುದೇ ನ್ಯಾಯಾಲಯಗಳಲ್ಲಿ ದಾವೆ ಅಥವಾ ಪ್ರಕರಣ ಹೂಡಿರಬಾರದು. ಖಾಯಂ ಜನತಾ ನ್ಯಾಯಾಲಯ ನೀಡುವ ತೀರ್ಪು ಯಾವುದೇ ಸಿವಿಲ್ ಅಥವಾ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಶ್ನಿಸುವ ಅವಕಾಶವಿರುವುದಿಲ್ಲ. ಆದ್ಯಾಗ್ಯೂ ಉಚ್ಚನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸುವ ಮೂಲಕ ತೀರ್ಪನ್ನು ಪ್ರಶ್ನಿಸಬಹುದಾಗಿದೆ ಎಂದು ಅವರು ಹೇಳಿದರು.
ಖಾಯಂ ಜನತಾ ನ್ಯಾಯಾಲಯದಲ್ಲಿ ಸಲ್ಲಿಸಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಉಭಯ ಪಕ್ಷಿದಾರರಿಗೆ ಮನವೊಲಿಸಿ ರಾಜಿ ಸಂಧಾನದ ಮೂಲಕ ಪ್ರಕರಣ ಇತ್ಯರ್ಥಪಡಿಸಲು ಪ್ರಯತ್ನಿಸಲಾಗುತ್ತದೆ. ಆದ್ಯಾಗ್ಯೂ ಉಭಯ ಪಕ್ಷಗಾರರು ಒಪ್ಪದೇ ಇದ್ದ ಸಂದರ್ಭದಲ್ಲಿ ಖಾಯಂ ಜನತಾ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಕಾನೂನಿನ್ವಯ ತ್ವರಿತವಾಗಿ ಪ್ರಕರಣ ಇತ್ಯರ್ಥಪಡಿಸಲು ಖಾಯಂ ಜನತಾ ನ್ಯಾಯಾಲಯದಿಂದ ತೀರ್ಪು ನೀಡಲಾಗುತ್ತದೆ. ಆದ್ದರಿಂದ ಸಾರ್ವಜನಿಕರು ಈ ಖಾಯಂ ಜನತಾ ನ್ಯಾಯಾಲಯದ ಸದುಪಯೋಗ ಪಡೆದುಕೊಂಡು ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡು ನೆಮ್ಮದಿ ಜೀವನಕ್ಕೆ ಮುಂದಾಗುವಂತೆ ಅವರು ಕರೆ ನೀಡಿದರು.



