ವಿಜಯಪುರ ಜಿಲ್ಲೆಯಲ್ಲಿ 2022 ರಿಂದ 2024ರ ವರೆಗೆ ದಾಖಲಾಗಿದ್ದ ಭೂ ಕಬಳಿಕೆ ಪ್ರಕರಣಗಳ ಕುರಿತು ವಿಶೇಷ ತನಿಖೆ ನಡೆಸಲಾಗಿದ್ದು, ಒಟ್ಟು 27 ಪ್ರಕರಣಗಳ ತನಿಖೆಯನ್ನು ಪೂರ್ಣಗೊಳಿಸಿ 200 ಜನ ಆರೋಪಿತರ ಮೇಲೆ ನ್ಯಾಯಾಲಯಕ್ಕೆ ಅಂತಿಮ ವರದಿಗಳನ್ನು ಸಲ್ಲಿಸಲಾಗಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದರು.
ವಿಜಯಪುರ ನಗರದ ಪೊಲೀಸ್ ಸಮುದಾಯ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹೆಚ್ಚುವರಿ ಪೊಲೀಸ್ ಅಧೀಕ್ಷಕರ ನೇತೃತ್ವದಲ್ಲಿ ರಚಿಸಲಾದ ವಿಶೇಷ ತನಿಖಾ ತಂಡವು ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಪ್ರಕರಣಗಳನ್ನು ಪರಿಶೀಲಿಸಿ, 25 ಪ್ರಕರಣಗಳಲ್ಲಿ ಭೂ ವಂಚನೆ ಸಾಬೀತುಪಡಿಸಿದೆ. ತನಿಖೆಯ ಫಲವಾಗಿ ಸುಮಾರು 158 ಎಕರೆ 13 ಗುಂಟೆ ಭೂಮಿ ಹಾಗೂ 9 ಎನ್ ಪ್ಲಾಟ್ಗಳನ್ನು ಮೂಲ ಭೂ ಮಾಲೀಕರ ಸ್ವಾಧೀನಕ್ಕೆ ಮರಳಿಸಲಾಗಿದೆ. ತನಿಖೆಯಲ್ಲಿ ಭೂ ಮಾಲೀಕರ ಹೆಸರಿನಲ್ಲಿ ನಕಲಿ ಆಧಾರ್ ಕಾರ್ಡ್ಗಳನ್ನು ಸೃಷ್ಟಿಸಿ, ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಕಪಟವಾಗಿ ಖರೀದಿ-ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ. ಈ ಪ್ರಕರಣಗಳಲ್ಲಿ ಸುಮಾರು 200 ಆರೋಪಿತರ ವಿರುದ್ಧ ದೋಷಾರೋಪಣ ಪತ್ರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಎರಡು ಪ್ರಕರಣಗಳಲ್ಲಿ ‘ಬಿ’ ಅಂತಿಮ ವರದಿ ಸಲ್ಲಿಸಲಾಗಿದೆ. ಭೂ ವಂಚನೆಗೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸುತ್ತಿದ್ದ ಗ್ಯಾಂಗ್ಗಳು, ಬಾಂಡ್ ರೈಟರ್ಗಳು, ಏಜೆಂಟ್ಗಳು ಮತ್ತು ಮಧ್ಯವರ್ತಿಗಳು ಸೇರಿಕೊಂಡು ವಯಸ್ಸಾದವರು, ಒಂಟಿಯಾಗಿ ವಾಸಿಸುವವರು ಹಾಗೂ ಊರಿನಿಂದ ದೂರವಿರುವ ಭೂ ಮಾಲೀಕರನ್ನು ಗುರಿಯಾಗಿಸಿಕೊಂಡು ವಂಚನೆ ನಡೆಸಿರುವುದು ತನಿಖೆಯಿಂದ ಗೊತ್ತಾಗಿದೆ. ಈ ಪ್ರಕರಣಗಳ ಯಶಸ್ವಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯವನ್ನು ಪೊಲೀಸ್ ಇಲಾಖೆ ಶ್ಲಾಘಿಸಿದರು.




