ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ತಮ್ಮ ಜೀವನದ ತತ್ವಗಳಂತೆ ನಡೆದು ಈ ದೇಶಕ್ಕೆ ಮಾದರಿಯಾಗಿದ್ದಾರೆ. ಅವರು ಈ ದೇಶಕ್ಕೆ ತಮ್ಮ ಸಂದೇಶದ ಮೂಲಕ ಅಮೂಲ್ಯವಾದ ಕೊಡುಗೆ ನೀಡಿದ್ದಾರೆ. ದೇಶದ ಈ ಮಹಾನ್ ವ್ಯಕ್ತಿಗಳ ತ್ಯಾಗ, ನಿಷ್ಠೆ, ಪ್ರಾಮಾಣಿಕತೆ, ಸತ್ಯ, ಆಹಿಂಸಾ, ಸರಳತೆಯ ತತ್ವಾದರ್ಶಗಳು ಹಾಗೂ ಅವರ ಜೀವನದ ಸಂದೇಶ ಮೌಲ್ಯಗಳು ನಮಗೆ ಪ್ರೇರಣೆಯಾಗಿವೆ ಎಂದು ಜಿಲ್ಲಾಧಿಕಾರಿ ಡಾ. ಆನಂದ ಕೆ ಹೇಳಿದರು.

ವಿಜಯಪುರ ಜಿಲ್ಲಾಡಳಿತ,ಜಿಲ್ಲಾ ಪಂಚಾಯತಿ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಗುರುವಾರ ನಗರದ ಜಿಲ್ಲಾ ಪಂಚಾಯತ್ ರಸ್ತೆಯಲ್ಲಿರುವ ಗಾಂಧಿ ಭವನದಲ್ಲಿ ಆಯೋಜಿಸಲಾದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ಅವರ ಜಯಂತಿ ಕಾರ್ಯಕ್ರಮದಲ್ಲಿ ಚರಕ ನೇಯುವ ಮೂಲಕ ವಿಶಿಷ್ಟವಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಈ ಮಹನೀಯರ ಕುರಿತು ಇಂದಿನ ಯುವಕರು ಅಧ್ಯಯನ ಮಾಡುವ ಮೂಲಕ ಅವರ ಚಿಂತನೆಗಳನ್ನು ಹಾಗೂ ಅವರ ಬದುಕನ್ನು ಅರಿಯಬೇಕಾಗಿದೆ. ಎಂದೆಂದಿಗೂ ಅವರ ಕಾರ್ಯ ಸಾಧನೆಯ ಮೇರು ಆದರ್ಶ ವ್ಯಕ್ತಿತ್ವ, ಅವರ ಚಿಂತನೆ. ನಂಬಿದ್ದ ತತ್ವಾದರ್ಶಗಳು ದೇಶದ ನಾಗರಿಕರಿಗೆ ಅಚ್ಚಳಿಯದೇ ನೆನಪಿನಲ್ಲುಳಿದಿವೆ. ಗಾಂಧೀಜಿಯವರ ಸತ್ಯ, ಅಹಿಂಸೆ ಮೂಲಕ ಕೈಗೊಂಡ ಸತ್ಯಾಗ್ರಹ ಬಲಿಷ್ಠ ಮಾನವ ಸಂಪನ್ಮೂಲ ಹೊಂದಿದ್ದ ಬ್ರಿಟಿಷ್ ತಲೆಬಾಗಿತ್ತು.ದೇಶದ ಸ್ವಾತಂತ್ರ್ಯಕ್ಕಾಗಿ ಗಾಂಧೀಜಿಯವರು ಚಿಂತನೆಗಳ ಜೊತೆಗೆ ಸತ್ಯಾಗ್ರಹ ನಡೆಸಿದ್ದರು. ಸತ್ಯಾಗ್ರಹದ ಮೂಲಕ ಸ್ವದೇಶಿ ತತ್ವ ನೀಡಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ತತ್ವಗಳಿಂದ ಜನರಿಗೆ ತಿಳಿಯುವ ಹಾಗೂ ಜನರಿಗೆ ಮನಮುಟ್ಟುವ ವಿಚಾರಗಳನ್ನು ತಿಳಿಸುತ್ತಿದ್ದರು. ಸ್ವದೇಶಿ ಬಟ್ಟೆ, ಖಾದಿ ಬಟ್ಟೆ ದೇಶೀಯ ವಸ್ತುಗಳ ಮಹತ್ವವನ್ನು ಅವರು ಸಾರಿದ್ದಾರೆಂದು ತಿಳಿಸಿದರು.




