ಕರ್ನಾಟಕದಲ್ಲಿ ಫೆಬ್ರುವರಿ 2024 ರಿಂದ ಜಾರಿಗೆ ಬಂದ ನಿಯಮದನ್ವಯ ಎಲ್ಲಾ ವಾಣಿಜ್ಯ ಸಂಸ್ಥೆಗಳು, ಕೈಗಾರಿಕೆಗಳು, ವ್ಯಾಪಾರ ಸಂಸ್ಥೆಗಳು, ಆಸ್ಪತ್ರೆಗಳು ಮತ್ತು ಇತರ ಸಂಘಟನೆಗಳ ನಾಮಫಲಕಗಳಲ್ಲಿ ಕಡ್ಡಾಯವಾಗಿ ಶೇಕಡ 60 ರಷ್ಟು ಕನ್ನಡ ಭಾಷೆ ಇರಬೇಕು. ಹಾಗಾಗಿ ಇಂದು ಬೆಳ್ಳಂಬೆಳಗ್ಗೆ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಪಟ್ಟಣದಲ್ಲಿ ತಾಲೂಕು ಆಡಳಿತ, ಪುರಸಭೆ ಮತ್ತು ಪೊಲೀಸ್ ಇಲಾಖೆಯು ಸರ್ಕಾರದ ಆದೇಶದಂತೆ ಅನ್ಯ ಭಾಷೆ ನಾಮಫಲಕಗಳನ್ನು ತೆರವುಗೊಳಿಸಿದೆ. ಅಂಗಡಿ ಮಾಲೀಕರು ಶೇಕಡ 60 ರಷ್ಟು ಕನ್ನಡ ಭಾಷೆಯಲ್ಲಿ ನಾಮಫಲಕ ಅಳವಡಿಸಿಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ. ಈ ಕಾರ್ಯಾಚರಣೆಯಲ್ಲಿ ಅಧಿಕಾರಿಗಳು ಪಾಲ್ಗೊಂಡಿದ್ದರು.





