ವಿಜಯಪುರ ಜಿಲ್ಲೆಯಲ್ಲಿರುವ ವಿವಿಧ ವಸತಿ ನಿಲಯಗಳ ವಿದ್ಯಾರ್ಥಿಗಳ ಆತ್ಮವಿಶ್ವಾಸ ಹೆಚ್ಚಿಸಲು ಹಾಗೂ ಪರೀಕ್ಷಾ ಒತ್ತಡವನ್ನು ತಗ್ಗಿಸುವ ನಿಟ್ಟಿನಲ್ಲಿ ಸಂಬಧಿಸಿದ ವಸತಿ ನಿಲಯಗಳ ವಾರ್ಡನ್ಗಳು ಹಾಗೂ ಹಾಸ್ಟೆಲ್ ಮೆಂಟರ್ಗಳು ಮಕ್ಕಳಿಗೆ ಮುಕ್ತವಾದ ವಾತಾವರಣ ಕಲ್ಪಿಸಿ, ಮಕ್ಕಳೊಂದಿಗೆ ಬೆರೆತು, ಸಮಸ್ಯೆಗಳನ್ನು ಆಲಿಸಿ-ಚರ್ಚಿಸಿ, ಪರಿಹರಿಸಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಆನಂದ ಕೆ ಹೇಳಿದರು.
ವಿಜಯಪುರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ವಿಜಯಪುರ ಇವರ ಸಂಯುಕ್ತಾಶ್ರಯದಲ್ಲಿ ಹಾಸ್ಟೇಲ್ ಮೆಂಟರ್ ಮತ್ತು ವಾರ್ಡನ್ ಗೆ ವಸತಿ ನಿಲಯಗಳ ನಿರ್ವಹಣೆಯ ಕುರಿತು ಮಾರ್ಗದರ್ಶಿ ಸಭೆ ಹಾಗೂ ಜಿಲ್ಲಾ ಮಟ್ಟದ ವಿದ್ಯಾರ್ಥಿಗಳ ಸುರಕ್ಷಾ ಮೇಲುಸ್ತುವಾರಿ ಸಮಿತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ವಸತಿ ನಿಲಯಗಳಲ್ಲಿನ ವಿದ್ಯಾರ್ಥಿಗಳು ಉತ್ತಮ ವಿದ್ಯಾಭ್ಯಾಸ ಪಡೆಯಲು ತಮ್ಮ ಕುಟುಂಬದಿಂದ ದೂರವಾಗಿರುತ್ತಾರೆ. ವಾರಕ್ಕೊಮ್ಮೆಯಾದರೂ ಬಂದು ಅವರೊಂದಿಗೆ ಊಟ ಮಾಡುವ ಮೂಲಕ ಅವರೊಂದಿಗೆ ಬೆರೆತು, ಕುಟುಂಬದಿಂದ ದೂರವಿರುವ ಭಾವನೆ ಹೋಗಲಾಡಿಸಲು ಪ್ರಯತ್ನಿಸಬೇಕು. ವಸತಿ ನಿಲಯಗಳಲ್ಲಿಉತ್ತಮವಾದ ಮುಕ್ತ ವಾತಾವರಣ ನಿರ್ಮಿಸಬೇಕು. ಅವರೊಂದಿಗೆ ಚರ್ಚಿಸಬೇಕು. ಮಕ್ಕಳೊಂದಿಗೆ ಮುಕ್ತವಾಗಿ ಮಾತನಾಡಿದಾಗ ಮಾತ್ರ ಅವರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ತಮ್ಮ ಆಸಕ್ತ ವಿಷಯಗಳ ಕುರಿತು ಮಕ್ಕಳಿಗೆ ಬೋಧನೆ ಮಾಡಬೇಕು. ತಮ್ಮಲ್ಲಿರುವ ಅನುಭವ ಜ್ಞಾನವನ್ನು ಹಂಚಿಕೊಳ್ಳಬೇಕು. ವಸತಿ ನಿಲಯಗಳಲ್ಲಿನ ಸಣ್ಣ ಪುಟ್ಟ ಸಮಸ್ಯೆಗಳನ್ನು ತಮ್ಮ ಹಂತದಲ್ಲಿಯೇ ಪರಿಹರಿಸುವ ಮೂಲಕ ಮಕ್ಕಳಲ್ಲಿನ ಆತ್ಮವಿಶ್ವಾಸ ಹೆಚ್ಚಿಸಲು ಕ್ರಮ ವಹಿಸಬೇಕು ಎಂದು ಹೇಳಿದರು.




