ಬರಪೀಡಿತ ಪ್ರದೇಶ ಎಂಬ ಹಣೆಪಟ್ಟಿ ಹೊಂದಿದ ವಿಜಯಪುರ ಜಿಲ್ಲೆಯಲ್ಲಿ ಪರಿಸರ ಕಾಳಜಿಯೊಂದಿಗೆ ಕೋಟಿ ವೃಕ್ಷ ಅಭಿಯಾನದ ಮೂಲಕ 0.17ರಷ್ಟಿದ್ದ ಜಿಲ್ಲೆಯ ಅರಣ್ಯ ಪ್ರದೇಶವನ್ನು ಶೇಕಡಾ 2ರಷ್ಟು ಹೆಚ್ಚಿಸಲಾಗಿದೆ. ಮುಂದಿನ ದಿನಗಳಲ್ಲಿ ಶೇ.10 ರಷ್ಟು ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಖಾತೆ ಸಚಿವರಾದ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.

ಶುಕ್ರವಾರ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಹಮ್ಮಿಕೊಂಡ ಕೈಗಾರಿಕೆ ಇಲಾಖೆ ವ್ಯಾಪ್ತಿಯ ಕೆಎಸ್ಡಿಎಲ್- ಸಿಎಸ್ಆರ್ ಅನುದಾನದಲ್ಲಿ ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ವಿಭಾಗದ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ 20ಜನ ಸಿಬ್ಬಂದಿಗಳಿಗೆ ಕಿಟ್ ವಿತರಿಸಿ ಅವರು ಮಾತನಾಡಿದರು.ಅತಿ ಕಡಿಮೆ ಅರಣ್ಯ ಪ್ರದೇಶ ಹೊಂದಿರುವ ವಿಜಯಪುರ ಜಿಲ್ಲೆಯ ಅರಣ್ಯ ಪ್ರದೇಶ ಹೆಚ್ಚಿಸುವ ನಿಟ್ಟಿನಲ್ಲಿ ಕಳೆದ 2016ರಲ್ಲಿ ಆರಂಭಿಸಿದ ಕೋಟಿ ವೃಕ್ಷ ಅಭಿಯಾನವನ್ನು ಹಮ್ಮಿಕೊಂಡು ಬರಲಾಗುತ್ತಿದೆ. ಜಿಲ್ಲೆಯ ವಿವಿಧೆಡೆ ಸಸಿ-ಗಿಡಗಳನ್ನು ಬೆಳೆಸಿ ಸಂರಕ್ಷಿಸಲಾಗುತ್ತಿದೆ. ಈ ಅಭಿಯಾನ ನಿರಂತರವಾಗಿ ಸಾಗಬೇಕು. ಮುಂದಿನ ದಿನಗಳಲ್ಲಿ ಜಿಲ್ಲೆಯ ಅರಣ್ಯ ಪ್ರದೇಶ ಶೇ.10 ರಿಂದ 15 ರಷ್ಟಾಗಿಸುವ ನಿಟ್ಟಿನಲ್ಲಿ ನಿರಂತರವಾಗಿ ಪರಿಸರ ರಕ್ಷಣೆ, ಗಿಡ-ಸಸಿ ಬೆಳೆಸುವ ಕಾರ್ಯ ನಡೆಯಬೇಕು. ನಿಸರ್ಗ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಈ ಕಾರ್ಯಕ್ಕೆ ಕೈ ಜೋಡಿಸಬೇಕು. ಅದರಂತೆ ನೀರಾವರಿ ಸಚಿವನಾಗಿದ್ದ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಹಲವು ನೀರಾವರಿ ಕಾರ್ಯಗಳನ್ನು ಕೈಗೊಂಡು ಅಭಿವೃದ್ಧಿಪಡಿಸಲಾಗಿದೆ. ದೇಶದ ರಾಜಸ್ಥಾನದ ಜೈಸಲ್ವೇರ್ ಹಾಗೂ ವಿಜಯಪುರ ತೀವ್ರ ಬರ ಪೀಡಿತ ಪ್ರದೇಶವಾಗಿತ್ತು. ಇಂತಹ ಬರ ಪೀಡಿತ ಪ್ರದೇಶದಲ್ಲಿ ಅರಣೀಕರಣ ಹೆಚ್ಚಿಸಿದ್ದು ಒಂದು ಸಾಧನೆಯಾಗಿದೆ. ನೀರಾವರಿ ಕಾಮಗಾರಿಗಳಿಂದ ಈ ಭಾಗದಲ್ಲಿ ಅಂತರಜಲಮಟ್ಟ ಹೆಚ್ಚಾಗಿ ಇಲ್ಲಿನ ಭೂಮಿಗೆ ಬೆಲೆ ಬಂದಿದೆ. ರೈತರು ಹಲವು ತಳಿಯ ಬೆಳೆಗಳನ್ನು, ಹಣ್ಣು ಹಂಪಲಗಳನ್ನು ಬೆಳೆದು ತಮ್ಮ ಆರ್ಥಿಕತೆಯನ್ನು ಸುಧಾರಿಸಿಕೊಂಡಿದ್ದಾರೆ. ಸಚಿವನಾಗಿ ನನ್ನ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತಿರುವುದು ನನಗೆ ತೃಪ್ತಿ ತಂದಿದೆ ಎಂದರು.




