ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆಯುವ ಗಂಗಾರತಿ ಮಾದರಿಯಲ್ಲಿ ಕೃಷ್ಣಾ ನದಿ ತೀರದಲ್ಲೂ ಕೃಷ್ಣಾರತಿ ಕಾರ್ಯಕ್ರಮ ಅನುಷ್ಠಾನಗೊಳಿಸಬೇಕು ಎಂಬ ಕೂಗು ಕೃಷ್ಣಾ ತೀರದಲ್ಲಿ ಮತ್ತೆ ಕೇಳಿ ಬರುತ್ತಿದೆ. ಉತ್ತರ ಕರ್ನಾಟಕದ ಜೀವನಾಡಿ ಕೃಷ್ಣಾನದಿ ಗಂಗಾ ನದಿಯಷ್ಟೇ ಪವಿತ್ರ. ಉತ್ತರ ಕರ್ನಾಟಕದ ಜೀವನಾಡಿ,ಕೋಟ್ಯಂತರ ಜನರ ದಾಹ ನೀಗಿಸಿ 6.5ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಚಟುವಟಿಕೆಗೆ ಕಾರಣವಾಗಿದೆ. ಮಳೆಗಾಲದಲ್ಲಿ ಕೃಷ್ಣೆಯ ನೀರು ವ್ಯರ್ಥವಾಗಿ ಹರಿದು ಹೋಗುವುದನ್ನು ತಪ್ಪಿಸಿ ನೀರಾವರಿ ಯೋಜನೆಗಳಿಗೆ ಸಮರ್ಪಕ ಬಳಕೆಯಲ್ಲೂ ಎಡವಿದ ಸರ್ಕಾರಗಳು ಕಾವೇರಿ ಹಾಗೂ ಕೃಷ್ಣಾ ನಾಡಿನ ಎರಡು ಕಣ್ಣುಗಳು ಎಂದು ಹೇಳುತ್ತಲೇ ಕಾವೇರಿಗೆ ನೀಡುವಷ್ಟು ಆದ್ಯತೆ ಕೃಷ್ಣೆಗೆ ನೀಡುತ್ತಿಲ್ಲ. ಕಾವೇರಿ ನದಿಗಿಂತ ವಿಶಾಲ ವ್ಯಾಪ್ತಿ ಹೊಂದಿರುವ ಕೃಷ್ಣೆಗೆ ಮಲತಾಯಿ ಧೋರಣೆ ಅನುಸುರಿಸುತ್ತಾ ಬಂದಿರುವುದು ಮತ್ತೆ ಮುಂದುವರೆದಿದೆ. ಈ ವಿರೋಧದ ನಡುವೆಯೂ ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜಸಾಗ ಬೃಂದಾವನದ ದೋಣಿ ವಿಹಾರ ಕೇಂದ್ರ ಬಳಿ 5 ದಿನಗಳ ಕಾವೇರಿ ಆರತಿ ಕಾರ್ಯಕ್ರಮಕ್ಕೆ ಶುಕ್ರವಾರ ರಾಜ್ಯ ಸರ್ಕಾರ ನಾಂದಿ ಹಾಡಿದೆ. ಕಾವೇರಿ ಮಾತೆಗೆ ಪುಷ್ಪಾರ್ಚನೆ ಮತ್ತು ಆರತಿ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿರುವ ಜಲಸಂಪನ್ಮೂಲ ಸಚಿವರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೃಷ್ಣಾ ಆರತಿಗೆ ಕ್ರಮಕೈಗೊಂಡಿಲ್ಲ ಎಂದು ಕೃಷ್ಣಾ ತೀರದ ಜನರು ಆರೋಪಿಸುತ್ತಿದ್ದಾರೆ. ಸಂಪೂರ್ಣ ಭರ್ತಿಯಾಗುವ ಆಲಮಟ್ಟಿ ಜಲಾಶಯಕ್ಕೆ ಪೊಲೀಸ್ ಸರ್ಪಗಾವಲಿನಲ್ಲಿ ಮುಖ್ಯಮಂತ್ರಿಗಳು ಬಾಗಿನ ಅರ್ಪಿಸುವ ಕಾರ್ಯಕ್ರಮ ಪ್ರತಿ ವರ್ಷ ನಡೆಯುತ್ತದೆ. ಇದರಲ್ಲಿ ಸಚಿವರು, ಶಾಸಕರು, ಅಧಿಕಾರಿಗಳಿಗೆ ಮಾತ್ರ ಅವಕಾಶವಿರುತ್ತದೆ. ಸಾರ್ವಜನಿಕರಿಗೆ ಅವಕಾಶವಿರುವುದಿಲ್ಲ. ಕೃಷ್ಣಾಆರತಿ ಹಮ್ಮಿಕೊಂಡರೆ ಸಾರ್ವಜನಿಕರೂ ಕೃಷ್ಣೆಗೆ ಆರತಿ ಮಾಡುವುದನ್ನು ಕಣ್ತುಂಬಿಕೊಳ್ಳಲು ಅವಕಾಶ ಸಿಗಲಿದೆ.ಬೃಹತ್ ಜಲಾಶಯ, ಮ್ಯೂಸಿಕಲ್ ಫೌಂಟೇನ್, ಲೇಸರ್ ಶೋ, ನಾನಾ ಉದ್ಯಾನ ಸೇರಿದಂತೆ ಪ್ರಮುಖ ಪ್ರವಾಸಿ ತಾಣವಾಗಿರುವ ಆಲಮಟ್ಟಿಗೆ ನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ವರ್ಷದಿಂದ ವರ್ಷಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಾ ಸಾಗಿದೆ. ಕೃಷ್ಣಾ ಆರತಿ ಹಮ್ಮಿಕೊಂಡರೆ ಸಾಂಸ್ಕೃತಿಕ ವಾತಾವರಣ ನಿರ್ಮಾಣದ ಜೊತೆಗೆ ರಾಜ್ಯದ ಪ್ರವಾಸಿಗರಲ್ಲದೆ ದೇಶದ ನಾನಾ ರಾಜ್ಯಗಳ ಪ್ರವಾಸಿಗರು ಆಗಮಿಸುತ್ತಾರೆ. ಪ್ರವಾಸೋದ್ಯಮ ಅಭಿವೃದ್ಧಿಯತ್ತ ಸಾಗುತ್ತದೆ ಎಂಬುದು ಈ ಭಾಗದ ಜನರ ಆಶಯವಾಗಿದೆ.

ಇನ್ನು ಆಲಮಟ್ಟಿ ಜಲಾಶಯದ ಬಳಿಯ ಚಂದ್ರಗಿರಿಯ ಚಂದ್ರಮ್ಮ ದೇವಸ್ಥಾನ, ಯಲಗೂರಿನ ಆಂಜನೇಯ ದೇವಸ್ಥಾನ, ಕೂಡಲ ಸಂಗಮ, ಚಿಕ್ಕಸಂಗಮ ಸೇರಿದಂತೆ ಕೆಲವೆಡೆ ಕೃಷ್ಣಾ ಆರತಿ ಮಾಡಲು ಪ್ರಶಸ್ತ ತಾಣಗಳಿವೆ. ಈ ಕುರಿತು ಅವಳಿ ಜಿಲ್ಲೆಯ ಸಚಿವರುಗಳು, ಶಾಸಕರುಗಳು ಸರಕಾರದ ಗಮನ ಸೆಳೆದು ಕೃಷ್ಣಾ ಆರತಿಗೆ ಪ್ರಯತ್ನಿಸಬೇಕು ಎಂಬ ಕೂಗು ಕೃಷ್ಣೆ ತೀರದಲ್ಲಿ ಮತ್ತಷ್ಟೂ ಹೆಚ್ಚಿದೆ. ಕಾವೇರಿ ಆರತಿಗೆ ಚಾಲನೆ ನೀಡಿದ ಸರ್ಕಾರ ಕೃಷ್ಣಾ ಆರತಿಗೆ ನಿರ್ಲಕ್ಷ ತೋರಿದೆ. ಕೂಡಲೇ ಕೃಷ್ಣಾ ಆರತಿ ಆರಂಭಿಸಬೇಕು ಇಲ್ಲವಾದಲ್ಲಿ ಪ್ರತಿಭಟನೆ ಎದುರಿಸಬೇಕಾಗುತ್ತದೆ.
– ಸೈಬಣ್ಣಾ ಅಂಗಡಿ. ಕರ್ನಾಟಕ ರಾಜ್ಯ ರೈತ ಸಂಘ ತಾಲೂಕ ಉಪಾಧ್ಯಕ್ಷ ನಿಡಗುಂದಿ.




