ವಿಜಯಪುರ, ಸೆಪ್ಟೆಂಬರ್, 27 ಬರಗಾಲ ಜಿಲ್ಲೆ ಎಂದು ಪ್ರಸಿದ್ದಿ. ನೀರಿಗೂ ತತ್ವಾರ ಇದ್ದ ವಿಜಯಪುರ ಇಂದು ಹಸರಿನಿಂದ ಕಂಗೊಳಿಸುತ್ತಿದೆ. ಪ್ರವಾಸೋದ್ಯಮ ಅಭಿವೃದ್ಧಿಯೊಂದಿಗೆ ಪರಿವರ್ತನೆಯಡೆಗೆ ಸಾಗುತ್ತಿದೆ ಎಂದು ನಾಗಠಾಣ ಶಾಸಕ ವಿಠಲ ಕಟಕದೊಂಡ ಹೇಳಿದರು. ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಹಯೋಗದೊಂದಿಗೆ ಶನಿವಾರ ನಗರದ ಶಿವಗಿರಿಯಲ್ಲಿ ನಡೆದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮಕ್ಕೆ ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ವಿಶ್ವವಿಖ್ಯಾತ ಗೋಳಗುಮ್ಮಟದೊಂದಿಗೆ ಐತಿಹಾಸಿಕ ತಾಣಗಳುಳ್ಳ ವಿಜಯಪುರ ಬರಗಾಲಕ್ಕೆ ತುತ್ತಾಗಿದ್ದ ಜಿಲ್ಲೆ. ಸಚಿವ ಎಂ.ಬಿ.ಪಾಟೀಲರು ನೀರಾವರಿ ಸಚಿವರಾಗಿದ್ದ ಸಂದರ್ಭದಲ್ಲಿ ಕೈಗೊಂಡ ಹಲವು ನೀರಾವರಿ ಯೋಜನೆ, ಕೋಟಿ ವೃಕ್ಷ ಅಭಿಯಾನ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಂದ ಇಂದು ಹಸಿರಿನಿಂದ ಕಂಗೊಳಿಸುತ್ತಿದೆ. ಇದರೊಂದಿಗೆ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶಗಳಿದ್ದು, ಈ ನಿಟ್ಟಿನಲ್ಲಿ ಇದಕ್ಕೆ ಪೂರಕವಾಗಿ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗುತ್ತಿದೆ. ರಸ್ತೆ ಸಂಪರ್ಕವೂ ಇದೆ. ಕುಡಿಯುವ ನೀರಿನ ಸಮಸ್ಯೆ ಇಲ್ಲ.ನಗರದ ಐತಿಹಾಸಿಕ ಭಾವಿ ಸ್ವಚ್ಛಗೊಳಿಸಿ. ಅನ್ಯ ಉದ್ದೇಶಕ್ಕೆ ನೀರು ಬಳಕೆಗೆ ಕ್ರಮವಹಿಸಿದ್ದರಿಂದ ಕುಡಿಯುವ ನೀರಿನ ಸಮಸ್ಯೆಯೂ ಕಡಿಮೆಯಾಗಿದೆ. ಜಿಲ್ಲೆಯಲ್ಲಿ ವಿಮಾನಯಾನ ಸೇವೆಯಿಂದ ದೇಶ-ವಿದೇಶದಿಂದ ಹೆಚ್ಚಿನ ಪ್ರವಾಸಿಗರು ಆಗಮಿಸಲು ಅನುಕೂಲವಾಗುತ್ತದೆ. ಇಲ್ಲಿ ಬೆಳೆದಿರುವ ಬೆಳೆಗಳಿಗೂ ಅಂತರರಾಷ್ಟ್ರೀಯ ಮಾರುಕಟ್ಟೆ ಲಭ್ಯವಾಗಲಿದೆ. ಜಿಯೋ ಟ್ಯಾಗ್ ಹೊಂದಿರುವ ಲಿಂಬೆಯೂ ಸೇರಿದಂತೆ ತೋಟಗಾರಿಕಾ ಬೆಳೆಗಳಾದ ದ್ರಾಕ್ಷಿ,ದಾಳಿಂಬೆ ಸೇರಿದಂತೆ ಹಣ್ಣು ಹಂಪಲ ವಿದೇಶಕ್ಕೆ ರಫ್ತು ಮಾಡುವುದರಿಂದ ಆರ್ಥಿಕವಾಗಿ ಸಬಲತೆ ಹೊಂದಲು ಅನುಕೂಲ ಒದಗಿಸಿದೆ ಎಂದು ಅವರು ಹೇಳಿದರು.
ಇಂದಿನ ವಿದ್ಯಾರ್ಥಿಗಳು ಸಾಧನೆ ಮಾಡಬೇಕು. ನಮ್ಮಲ್ಲಿರುವ ಸ್ಮಾರಕಗಳ ಕುರಿತಾಗಿ ತಿಳಿದುಕೊಳ್ಳಬೇಕು. ಪ್ರವಾಸೋದ್ಯಮದಿಂದ ಅನೇಕ ಲಾಭಗಳಿದ್ದು ಉದ್ಯೋಗ ಆರ್ಥಿಕತೆ ವೃದ್ಧಿಗೆ ಪ್ರವಾಸೋದ್ಯಮ ಬಹುದೊಡ್ಡ ಪಾತ್ರ ವಹಿಸಲಿದ್ದು, ಜಿಲ್ಲೆಯಲ್ಲಿರುವ ಐತಿಹಾಸಿಕ ಸ್ಮಾರಕಗಳನ್ನು ಸಂರಕ್ಷಿಸಲು ಎಲ್ಲರೂ ಕೈ ಜೋಡಿಸುವ ಮೂಲಕ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಅವರು ಹೇಳಿದರು.



