ಚಿತ್ರದುರ್ಗದ ಕೋಟೆಗೆ ಸಂಕಷ್ಟ ಎದುರಾಗಿದ್ದಾಗ ಯಾವುದೇ ಯುದ್ಧ ಕೌಶಲ್ಯಗಳಿಲ್ಲದಿದ್ದರೂ ಛಲದಿಂದ ಶತ್ರು ಪಡೆಯ ವಿರುದ್ಧ ಒನಕೆಯನ್ನು ಅಸ್ತ್ರ ವನ್ನಾಗಿಸಿಕೊಂಡು ಹೋರಾಡಿ, ನಾಡ ರಕ್ಷಣೆ ಮಾಡಿದ ಮಹಿಳೆ ಒನಕೆ ಓಬವ್ವ ಧೀರತನ ನಮಗೆಲ್ಲ ಸ್ಫೂರ್ತಿಯಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರು ಹೇಳಿದರು.
ವಿಜಯಪುರ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಮಂಗಳವಾರ ಆಯೋಜಿಸಿದ ವೀರವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಓರ್ವ ಮಹಿಳೆಯಾಗಿದ್ದರೂ ಧೈರ್ಯ, ಸಾಹಸದಿಂದ ಶತ್ರುಗಳ ದಾಳಿಗೆ ಎದೆಗುಂದದೆ ಒನಕೆ ಹಿಡಿದು ಹೋರಾಡಿದ ಓಬವ್ವ ಅವರ ಧೀರತನದ ಜೀವನ ಇಂದಿನ ಪೀಳಿಗೆ ಮಾದರಿಯಾಗಿದೆ. ಸಂಕಷ್ಟದಲ್ಲಿ ಸ್ವಯಂಪ್ರೇರಿತವಾಗಿ ಸೂಕ್ತ ನಿರ್ಧಾರ ಕೈಗೊಳ್ಳುವ ಓಬವ್ವರಂತಹ ವೀರರ ಕಥೆಗಳನ್ನು ಮಕ್ಕಳಿಗೆ ತಿಳಿಸುವುದರ ಮೂಲಕ ಮಕ್ಕಳಲ್ಲಿ ಆತ್ಮಸ್ಥೆರ್ಯ ತುಂಬಲು ಸಹಕಾರಿಯಾಗುವುದರೊಂದಿಗೆ ಭವಿಷ್ಯದಲ್ಲಿ ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ನೀಡಬಹುದಾಗಿದೆ. ಐತಿಹಾಸಿಕ ಕೋಟೆ ಚಿತ್ರದುರ್ಗ ಎಂದರೆ ನೆನಪಾಗುವುದೇ ಒನಕೆ ಓಬವ್ವಳ ಸಾಹಸದ ಕಥೆಗಳು. ಇವರ ಜೀವನ ಚರಿತ್ರೆ ಇತಿಹಾಸ ಪುಟಗಳಲ್ಲಿ ಅಜರಾಮರವಾಗಿವೆ. ವೀರತನದ ಪ್ರತೀಕ ಒನಕೆ ಓಬವ್ವ. ಇವರ ಹೆಸರು ಇಂದಿಗೂ ಇತಿಹಾಸದ ಪುಟಗಳಲ್ಲಿ ರಾರಾಜಿಸುತ್ತಿವೆ. ಒನಕೆ ಓಬವ್ವರಂತಹ ಅನೇಕ ವೀರ-ಶೂರರ ಕಥೆಗಳು ಸದಾ ನಮಗೆಲ್ಲ ಆದರ್ಶ ಮಯವಾಗಿವೆ ಎಂದು ಹೇಳಿದರು.




