ಶುಕ್ರವಾರ ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ವಿಜಯಪುರ ಹಾಗೂ ಬೆಂಗಳೂರಿನ ಕರ್ನಾಟಕ ಕ್ರೀಡಾ ಪ್ರಾಧಿಕಾರ ಇವರ ಸಂಯುಕ್ತಾಶ್ರಯದಲ್ಲಿ ವಿಜಯಪುರ ತಾಲೂಕಾ ಮಟ್ಟದ ದಸರಾ ಕ್ರೀಡಾಕೂಟ ಕೂಟಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಜಶೇಖರ್ ದೈವಾಡಿ ಮಾತನಾಡಿ, ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದ ಅವರ ಜನ್ಮ ದಿನಾಚರಣೆಯಾದ ಇಂದು ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಇಂತಹ ಮಹಾನ್ ಕ್ರೀಡಾ ಸಾಧಕರ ಸಾಧನೆಯಿಂದ ಸ್ಪೂರ್ತಿ ಪಡೆದುಕೊಳ್ಳಬೇಕು. ನಿರ್ದಿಷ್ಟ ಗುರಿಯೊಂದಿಗೆ ಸತತ ಅಭ್ಯಾಸ. ತನ್ಮಯತೆ, ಕೌಶಲ್ಯ ಹಾಗೂ ಆ ದಿಸೆಯಲ್ಲಿನ ಪ್ರಯತ್ನ ಅಗತ್ಯವಾಗಿದೆ. ಕ್ರೀಡಾಪಟುಗಳು ತಮ್ಮ ಆಸಕ್ತಿಯ ಕ್ರೀಡೆಯಲ್ಲಿ ಬೆಳವಣಿಗೆ ಹೊಂದಲು ಇಂತಹ ಕ್ರೀಡಾಕೂಟಗಳ ಆಯೋಜನೆ ಅವರ ಆಸಕ್ತಿಗೆ ಮತ್ತಷ್ಟು ಪ್ರೋತ್ಸಾಹ ನೀಡುತ್ತದೆ. ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ತಾಲೂಕಾ ಮಟ್ಟದ ಕ್ರೀಡಾಕೂಟವನ್ನು ಆಯೋಜಿಸಿದೆ ಎಂದು ಹೇಳಿದರು.

ಜಾವಿದ ಎಂ ಜಮಾದಾರ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿ, ಕ್ರೀಡೆಗಳಲ್ಲಿ ಸೋಲು-ಗೆಲವು ಸಾಮಾನ್ಯ. ಸೋಲಿಗೆ ಕುಗ್ಗದೆ, ಗೆಲುವಿಗೆ ಹಿಗ್ಗದೆ ಎರಡನ್ನು ಸಮಾನವಾಗಿ ಸ್ವೀಕರಿಸಿ ನಿರಂತರವಾಗಿ ಪರಿಶ್ರಮದಿಂದ ಕ್ರೀಡೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ರಾಜ್ಯ, ರಾಷ್ಟ್ರ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವಂತೆ ಅವರು ಹೇಳಿದರು. ಕ್ರೀಡೆಗಳು ಮಾನಸಿಕ ಹಾಗೂ ದೈಹಿಕ ಸದೃಢತೆಗೆ ಸಹಕಾರಿಯಾಗಿದೆ. ಪ್ರತಿಯೊಬ್ಬರು ಕ್ರೀಡಾ ಹವ್ಯಾಸ ಹೊಂದಿ, ದಿನನಿತ್ಯ ವ್ಯಾಯಾಮ, ಆಟೋಟಗಳಂತಹ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು ಎಂದು ಹೇಳಿದರು.
ಅಡಿವೆಪ್ಪ ಸಾಲಗಲ್ ಮಾತನಾಡಿ, ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದ್ ಅವರು ಹಾಕಿಯಲ್ಲಿ ತಮ್ಮದೇಯಾದ ಛಾಪು ಮೂಡಿಸಿ ನಮ್ಮೆಲ್ಲರಿಗೂ ಸ್ಫೂರ್ತಿಯಾಗಿದ್ದಾರೆ. ಅವರ ಸತತ ಪರಿಶ್ರಮ ಕಠಿಣ ಅಭ್ಯಾಸಗಳಿಂದ ಅವರು ಮಾಡಿರುವ ಸಾಧನೆಯನ್ನು ವಿದ್ಯಾರ್ಥಿಗಳು ಪ್ರೇರಣೆ ಹೊಂದಿ ಸಾಧನೆಯ ಹಾದಿಯಲ್ಲಿ ಸಾಗಿ, ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಿ, ಸಾಧನೆ ಮಾಡಿ ಜಿಲ್ಲೆಯ ಕೀರ್ತಿ ಹೆಚ್ಚಿಸಬೇಕು ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ವಾರ್ತಾ ಅಧಿಕಾರಿ ಅಮರೇಶ ದೊಡಮನಿ,ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಂತೋಷ ಭೋವಿ, ನಾಗರಾಜ ಲಂಬು, ಎಸ್.ಕೆ.ಇನಾಮದಾರ್, ಜಿ.ಎಂ.ಕೊಕರೆ,ಸಂಜಯ ಹಿರೆಮಠ, ಎಸ್.ಎಸ್.ಹಿರೇಮಠ, ಕೃಷ್ಣ ರಾಠೋಡ,ಚಂದ್ರಕಾಂತ್ ತಾರನಾಳ ಸೇರಿದಂತೆ ವಿವಿಧ ಕ್ರೀಡಾ ತರಬೇತಿದಾರರು, ಕ್ರೀಡಾಪಟುಗಳು, ಕ್ರೀಡಾ ಶಾಲೆಯ ವಿದ್ಯಾರ್ಥಿಗಳು ಹಾಗೂ ಕ್ರೀಡಾಸಕ್ತರು ಉಪಸ್ಥಿತರಿದ್ದರು.



