ಐತಿಹಾಸಿಕ ಸ್ಮಾರಕಗಳ ರಕ್ಷಣೆ, ಹಸರೀಕರಣಕ್ಕಾಗಿ, ಸ್ವಚ್ಛತೆಗಾಗಿ 2025ನೇ ಸಾಲಿನ ಡಿಸೆಂಬರ್ 7 ರಂದು ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ವೃಕ್ಷೋಥಾನ್ ಹೆರಿಟೇಜ್ ರನ್ನಲ್ಲಿ ಜಿಲ್ಲಾಡಳಿತ, ಸ್ವಯಂ ಸೇವಾ ಸಂಘ-ಸಂಸ್ಥೆಗಳು, ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ಸಕ್ರೀಯವಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಖಾತೆ ಸಚಿವರಾದ ವಿಜಯಪುರ ಜಿಲ್ಲಾ ಉಸ್ತುವಾರಿ ಎಂ.ಬಿ.ಪಾಟೀಲ ಕರೆ ನೀಡಿದರು.
ಶನಿವಾರ ಸಂಜೆ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡ ವೃಕ್ಷೋಥಾನ್ ಹೆರಿಟೇಜ್ ರನ್ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು ಜಿಲ್ಲೆಯಲ್ಲಿ ಕಳೆದ 2016 ರಿಂದ ಕೋಟಿ ವೃಕ್ಷ ಅಭಿಯಾನ ಆರಂಭಿಸಲಾಗಿದ್ದು, ವೃಕ್ಷೋಥಾನ್ ಆರಂಭದಿಂದ ಇಲ್ಲಿಯವರೆಗೆ ಕೋಟಿ ವೃಕ್ಷ ಅಭಿಯಾನದಡಿ ಜಿಲ್ಲೆಯಲ್ಲಿ 1.50 ಕೋಟಿ ಸಸಿಗಳನ್ನು ನೆಟ್ಟು ಪೋಷಿಸಲಾಗುತ್ತಿದೆ. ಆ ಮೂಲಕ ಅತ್ಯಂತ ಕಡಿಮೆ ಇದ್ದ ಜಿಲ್ಲೆಯ ಅರಣ್ಯ ಪ್ರದೇಶವನ್ನು ರಾಜ್ಯದ ಅರಣ್ಯ ಪ್ರದೇಶ ಸರಾಸರಿ ಸಮತೋಲಕ್ಕೆ ತರುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತಿದೆ. ಕಳೆದ 2023ರಲ್ಲಿ ನಡೆದ ವೃಕ್ಷೋಥಾನ್ ಹೆರಿಟೇಜ್ ರನ್ನಲ್ಲಿ 8 ಸಾವಿರ ಓಟಗಾರರು. 2024ರಲ್ಲಿ 9400 ಓಟಗಾರರು ಭಾಗವಹಿಸಿದ್ದರು. ಈ ಬಾರಿ ನಡೆಯುವ ವೃಕ್ಷೋಥಾನ್ ಹೆರಿಟೇಜ್ ರನ್ನಲ್ಲಿ ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ 15 ಸಾವಿರ ಓಟಗಾರರು ಭಾಗವಹಿಸುವ ನಿರೀಕ್ಷೆ ಇದೆ. ಈ ಅಭಿಯಾನಕ್ಕೆ ಎಲ್ಲರೂ ಕೈ ಜೋಡಿಸುವ ಮೂಲಕ ಸಹಕಾರ ನೀಡಬೇಕು. ಜಿಲ್ಲೆಯಲ್ಲಿ ಯಶಸ್ವಿಯಾಗಿ ಹಮ್ಮಿಕೊಂಡ ಕೋಟಿ ವೃಕ್ಷ ಅಭಿಯಾನದ ಯಶಗೋಥೆ ಅಂತರರಾಷ್ಟ್ರೀಯ ಮಟ್ಟದ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟಗೊಂಡಿದ್ದು, ಅಭಿಯಾನದ ಯಶಸ್ವಿ ಕೈಗನ್ನಡಿಯಾಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಜಯಪುರ ಜಿಲ್ಲೆ ಗುರುತಿಸಿಕೊಂಡಿದ್ದು, ಜಿಲ್ಲಾಡಳಿತ ಸೇರಿದಂತೆ ಸಾರ್ವಜನಿಕರ ಸಹಭಾಗಿತತ್ವದಿಂದ ಈ ಶ್ರೇಯಸ್ಸು ಜಿಲ್ಲೆಗೆ ಲಭಿಸಿದೆ. ಹೆರಿಟೇಜ್ ರನ್ನಲ್ಲಿ ಸ್ವಯಂ ಪ್ರೇರಿತವಾಗಿ ಭಾಗವಹಿಸಿ ಕ್ರೀಯಾಯಶೀಲರಾಗಿ ಕಾರ್ಯನಿರ್ವಹಿಸುತ್ತಿರುವ ಹಿನ್ನಲೆಯಲ್ಲಿ ಹಳ್ಳಿ ಹಳ್ಳಿಗಳಲ್ಲಿ, ಶಾಲಾ ಕಾಲೇಜ್ಗಳಲ್ಲಿ ಸರ್ಕಾರಿ ಸಂಸ್ಥೆಗಳಲ್ಲಿ, ಉದ್ಯಾನವನಗಳಲ್ಲಿ ನಗರದ ವಾರ್ಡಿನ ಖಾಲಿ ಜಾಗಗಳಲ್ಲಿ ಸಾರ್ವಜನಿಕರು ಸಸಿ ನೆಡುವ ಮೂಲಕ ತಮ್ಮ ಪರಿಸರ ಪ್ರೇಮವನ್ನು ಮೆರೆದು ಮೆರಗು ಹೆಚ್ಚಿಸಬೇಕು. ಈ ಬಾರಿಯ ವೃಕ್ಷೋಥಾನ್ ಹೆರಿಟೇಜ್ ರನ್ ಯಶಸ್ವಿಯಾಗಿ ಹಮ್ಮಿಕೊಂಡು ರಾಷ್ಟ್ರದ ಮಹಾನಗರಗಳು ಸೇರಿದಂತೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಈ ವೃಕ್ಷೋಥಾನ್ ಹೆರಿಟೇಜ್ ರನ್ ಗುರುತಿಸುವಂತಾಗಬೇಕು ಎಂದು ಅವರು ಹೇಳಿದರು.

ಇದೆ ವೇಳೆ ಮಹಾನಗರ ಪಾಲಿಕೆ ಮಹಾಪೌರ ಮಡಿವಾಳಪ್ಪ ಕರಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಎಎಸ್ಐ ಇಲಾಖೆ ಧಾರವಾಡ ವೃತ್ತದ ರಮೇಶ ಮೂಲಿಮನಿ, ಕರ್ನಲ್ ವಂಶಿ, ಮುರುಗೇಶ ಪಟ್ಟಣಶೆಟ್ಟಿ, ಮಹಾಂತೇಶ ಬಿರಾದಾರ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.




