ಸಮಾಜದಲ್ಲಿ ನಾವೆಲ್ಲರೂ ಸಮಾನರು, ತಾರತಮ್ಯ ಬೇಧ-ಭಾವ ತೊರೆದು ಎಲ್ಲರೂ ಸಮಾನರೆಂಬುದು ಸಂವಿಧಾನ ತಿಳಿಸುತ್ತದೆ. ನಮ್ಮ ಸಂವಿಧಾನದ ಆಶಯಗಳಿಗನುಗುಣವಾಗಿ ನಡೆಯೋಣ ಎಂದು ಧಾರವಾಡದ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷರಾದ ಸಂಗಮೇಶ್ವರ ಬಬಲೇಶ್ವರ ಹೇಳಿದರು.
ವಿಜಯಪುರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಹಾಗೂ ಭಾರತದ ಸಂವಿಧಾನ ಪ್ರಸ್ತಾವನೆಗೆ ಪುಷ್ಪಾರ್ಚನೆ ಮಾಡಿ, ಅವರು ಮಾತನಾಡಿದರು.
ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನವು ಬಡವರ, ಮಹಿಳೆಯರ ಶೋಷಿತರ ಧ್ವನಿಯಾಗಿದೆ. ಸಂವಿಧಾನ ದೇಶದ ಜನರನ್ನು ಸಶಕ್ತಗೊಳಿಸಿ, ಸರ್ವರಿಗೂ ಸಮಾನತೆ ಒದಗಿಸಿದೆ. ನಾವೆಲ್ಲರೂ ಘನತೆ ಗೌರವದಿಂದ ಬದುಕುವ ಹಕ್ಕನ್ನು ಕಲ್ಪಿಸಿ, ಎಲ್ಲರ ಬಾಳಿನ ಬೆಳಕಾಗಿದೆ. ನಮ್ಮ ಸಂವಿಧಾನದ ಆಶಯಗಳ ಕುರಿತು ಶಾಲಾ ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ತಿಳಿಸಿಕೊಡಬೇಕು ಎಂದು ಹೇಳಿದರು.

ಇದೆ ವೇಳೆ ಜಿಲ್ಲಾಧಿಕಾರಿ ಡಾ.ಆನಂದ.ಕೆ ಮಾತನಾಡಿ, ನಮ್ಮ ಸಂವಿಧಾನ ಇಡೀ ವಿಶ್ವದಲ್ಲಿಯೇ ದೊಡ್ಡ ಸಂವಿಧಾನವಾಗಿದೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ ಅವರ ರಚಿತ ಸಂವಿಧಾನ ಎಲ್ಲರ ಸದಾಶಯ ಹೊಂದಿದ ಬದುಕಿನ ದಾಖಲೆಯಾಗಿದೆ. ಜಾರಿಗೊಳಿಸುವ ಯಾವುದೇ ಕಾನೂನುಗಳು ಸಂವಿಧಾನದ ಆಶಯಗಳಿಗನುಗುಣವಾಗಿ ರೂಪುಗೊಳ್ಳುತ್ತವೆ. ಸಂವಿಧಾನದ ಪ್ರಸ್ತಾವನೆಯಲ್ಲಿ ಗೌರವದಿಂದ ಬದುಕಲು ಎಲ್ಲರಿಗೂ ಕಾನೂನು ಬದ್ಧವಾಗಿ ಹೇಳಲು ಅವಕಾಶ ನೀಡಿದೆ. ಅವಕಾಶಗಳ ಸಮಾನತೆಯನ್ನು ತಂದುಕೊಟ್ಟಿದೆ. ಸಂವಿಧಾನದ ಪ್ರಸ್ತಾವನೆಯಲ್ಲಿ ಪ್ರತಿಯೊಂದು ಅಂಶಗಳು ಒಳಗೊಂಡಿದ್ದು, ಅನೇಕ ಸಮಸ್ಯೆಗಳಿಗೆ ಪರಿಹಾರಾತ್ಮಕವಾಗಿ ಸಲಹೆಗಳನ್ನು ಸಂವಿಧಾನ ನೀಡುತ್ತದೆ ಮೂಲಭೂತ ಹಕ್ಕುಗಳನ್ನು ನೀಡಿದ ಸಂವಿಧಾನವು ಜವಾಬ್ದಾರಿಯುತ ನಾಗರಿಕರಾಗಿ ನಿರ್ವಹಿಸಬೇಕಾದ ಕರ್ತವ್ಯಗಳ ಬಗ್ಗೆಯೂ ತಿಳಿಸಿದೆ. ನಾವೆಲ್ಲರೂ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯೋಣ ಎಂದು ಹೇಳಿದರು.




