ಪೋಷಕ-ಶಿಕ್ಷಕರ ಮಹಾಸಭೆಯನ್ನು ಅರ್ಥಪೂರ್ಣವಾಗಿ ಆಯೋಜಿಸಿ,ಯಶಸ್ವಿಗೊಳಿಸಲು -ಜಿಪಂ ಸಿಇಒ ರಿಷಿ ಆನಂದ ಕರೆ
ವಿಜಯಪುರ, ಸರ್ಕಾರಿ ಶಾಲೆಗಳು ಮತ್ತು ಕಾಲೇಜಿನ ಎಲ್ಲಾ ಅರ್ಹ ವಯಸ್ಸಿನ ಮಕ್ಕಳಿಗೆ ಒಳಗೊಳ್ಳುವಿಕೆ, ಪ್ರವೇಶಾವಕಾಶ ಮತ್ತು ಸಮಾನತೆಯ ಮೂಲಕ ಶಿಕ್ಷಣವನ್ನು ಒದಗಿಸುತ್ತವೆ. ಸರ್ಕಾರಿ ಶಾಲಾ-ಕಾಲೇಜುಗಳು ಎಸ್.ಡಿ.ಎಂ.ಸಿ..ಸಿ.ಡಿ.ಸಿ. ಮತ್ತು ಒಟ್ಟಾರೆ ಸಮುದಾಯದ ಹಿತಾಸಕ್ತಿಗಳ ಫಲಶೃತಿಯಾಗಿವೆ. ಈ ನಿಟ್ಟಿನಲ್ಲಿ ಎಲ್ಲಾ ಸರ್ಕಾರಿ ಶಾಲಾ-ಕಾಲೇಜುಗಳ ಎಲ್ಲಾ ಪ್ರಮುಖ ಪಾಲುದಾರರನ್ನು ತಲುಪಲು ನವೆಂಬರ್ 14ರಂದು ಮಕ್ಕಳ ದಿನಾಚಾರಣೆಯ ಪ್ರಯುಕ್ತ ರಾಜ್ಯಾದ್ಯಂತ ಏಕಕಾಲದಲ್ಲಿ 2025-26ನೇ ಸಾಲಿನ ಪೋಷಕ-ಶಿಕ್ಷಕರ ಮಹಾಸಭೆಯನ್ನು ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ. ಪ್ರೌಢಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಆಯೋಜಿಸಲಾಗಿದೆ. ಶಾಲಾ-ಕಾಲೇಜುಗಳಲ್ಲಿ ದಾಖಲಾತಿಯನ್ನು ಹೆಚ್ಚಿಸುವ ಮೂಲಕ ಸರ್ಕಾರಿ ಶಾಲಾ-ಕಾಲೇಜುಗಳ ಬಗ್ಗೆ, ಪೋಷಕರಲ್ಲಿ ಭರವಸೆಯನ್ನು ಹೆಚ್ಚಿಸುವ ಮಹತ್ತರವಾದ ಗುರಿಯೊಂದಿಗೆ ಈ ಸಭೆಯನ್ನು ಆಯೋಜಿಸಲಾಗಿದೆ. ಆದಕಾರಣ, ಪೋಷಕ ಶಿಕ್ಷಕರ ಮಹಾಸಭೆಯನ್ನು ಅರ್ಥಪೂರ್ಣವಾಗಿ ಆಯೋಜಿಸಿ ಎಂದು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಅವರು ಕರೆ ನೀಡಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ರಾಷ್ಟ್ರ ನಿರ್ಮಾಣ ಮತ್ತು ಚೈತನ್ಯಶೀಲ ಸಮಾಜ ನಿರ್ಮಾಣದ ಸಾಕಾರಕ್ಕಾಗಿ ಅರ್ಹ ವಯೋಮಾನದ ಎಲ್ಲಾ ಮಕ್ಕಳು ಶಾಲೆಗೆ ದಾಖಲಾಗಿ, ನಿರಂತರವಾಗಿ ಹಾಜರಾಗಿ ಗುಣಮಟ್ಟದ ಶಿಕ್ಷಣ ಪಡೆಯುವುದು ಅತ್ಯಗತ್ಯವಾಗಿರುತ್ತದೆ. ಮಕ್ಕಳ ಕಲಿಕೆಯು ಶಾಲೆ, ಮನೆ ಮತ್ತು ಸಮಾಜಗಳ ನಡುವೆ ನಿರಂತರ ಸಂಪರ್ಕವನ್ನು ಕಲ್ಪಿಸುತ್ತದೆ. ಮಕ್ಕಳ ಸವಾರ್ಂಗೀಣ ಅಭಿವೃದ್ಧಿಯಲ್ಲಿ ಪೋಷಕರ ಪಾತ್ರ ಅತ್ಯಂತ ಪ್ರಮುಖವಾಗಿದ್ದು, ಅವರನ್ನು ಈ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿರುತ್ತದೆ. ವಿದ್ಯಾರ್ಥಿಗಳ ಗುಣಮಟ್ಟದ ಶಿಕ್ಷಣಕ್ಕೆ ಪೂರಕವಾಗಿ ಸರ್ಕಾರದಿಂದ ಅನುಷ್ಠಾನಿಸಲಾಗಿರುವ ಉಪಕ್ರಮಗಳು, ಪೋಷಕರು, ಶಿಕ್ಷಕರು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾದ ವಾತಾವರಣ ನಿರ್ಮಿಸುವುದು ಪೋಷಕ ಶಿಕ್ಷಕ ಸಭೆಗಳ ಉದ್ದೇಶವಾಗಿದೆ. ಈಗಾಗಲೇ ಜಿಲ್ಲಾ ವ್ಯಾಪ್ತಿಯ ಎಲ್ಲಾ ಸರ್ಕಾರಿ ಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ಪೋಷಕ ಶಿಕ್ಷಕರ ಮಹಾಸಭೆ ನಡೆಸುವ ಬಗ್ಗೆ, ಸೂಕ್ತ ಮಾರ್ಗದರ್ಶನ ಮಾಡಲಾಗಿದ್ದು, ಈಗಾಗಲೇ ಪ್ರತಿ ಸರಕಾರಿ ಶಾಲೆ-ಕಾಲೇಜುಗಳಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಂದು ಶಿಕ್ಷಕರ ಜೊತೆಗೆ ಪಾಲಕರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸೂಕ್ತ ಮಾರ್ಗದರ್ಶನ ಮಾಡಲು ವಿನಂತಿಸಿದ್ದಾರೆ.



