ವಿಜಯಪುರದಲ್ಲಿ ಹಮ್ಮಿಕೊಂಡಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾಜಿ ಶಾಸಕ ದೇವಾನಂದ ಚವ್ಹಾಣ ಮಾತನಾಡಿ. ಇಂಡಿ ತಾಲೂಕಿನ ತಾಂಬಾ ಗ್ರಾಮದಲ್ಲಿ ಪ್ರತಿ ವರ್ಷವೂ ವೈಭವಯುತವಾಗಿ ಅರ್ಥ ಪೂರ್ಣವಾಗಿ ಜರುಗಲಿರುವ 54ನೇ ವರ್ಷದ ಶ್ರೀ ನಾಡದೇವಿ ನವರಾತ್ರಿ ಉತ್ಸವದ ಸಂಪೂರ್ಣ ಶ್ರೇಯಸ್ಸು ದಿವಂಗತ ನಮ್ಮ ತಂದೆಯವರಾದ ಫಲಸಿಂಗ ನಾರಾಯಣ ಚವ್ಹಾಣರವರಿಗೆ ಸಲ್ಲಬೇಕು. ಅಪಾರ ದೈವಭಕ್ತಿಯನ್ನು ಮೈಗೂಡಿಸಿಕೊಂಡಿರುವುದರ ಜೊತೆಗೆ ನಾಡು-ನುಡಿ, ಶಿಕ್ಷಣ, ಕಲೆ, ಕೃಷಿ ಮತ್ತು ಸಾಮಾಜಿಕ ಚಿಂತನೆಯ ತುಡಿತ-ಮಿಡಿತವನ್ನು ಹೊಂದಿದವರು ನಮ್ಮ ತಂದೆಯವರು. ಇಂದಿಗೆ ಸರಿಯಾಗಿ 54 ವರ್ಷಗಳ ಹಿಂದೆ (1972 ರಿಂದ) ತಾಂಬಾ ಗ್ರಾಮದಲ್ಲಿ ಮಿತ್ರಬಳಗದ ಸಹಕಾರದೊಂದಿಗೆ ಆರಂಭಿಸಿದ ಆ ಉತ್ಸವ ಪ್ರತಿ ವರ್ಷವೂ ತಾಂಬಾಗ್ರಾಮದ ಭಕ್ತಾದಿಗಳ ತನುಮನ ಧನದ ಸಂಪ್ರೇರಣೆ, ಸುತ್ತಮುತ್ತಲಿನ ಗ್ರಾಮದ ಭಕ್ತ ಸಾಗರದ ಅದಮ್ಯ ಉತ್ಸಾಹ ಹಾಗೂ ಸಹಕಾರದ ಫಲವಾಗಿ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಾ ಬರುತ್ತಿರುವುದನ್ನು ಬಾಲಕನಾಗಿದ್ದಾಗಲೇ ನಾನು ಕಂಡಿದ್ದೆ. ಅವರ ಕಾಲಾನಂತರ ಅವರು ಹಾಕಿ ಕೊಟ್ಟ ಸನ್ಮಾರ್ಗದಲ್ಲಿ ಸಾಗುವ ಮಹದಾಶೆಯಿಂದ ನಾನು ಅದನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇನೆ. ಶ್ರೀ ಅಂಬಾಭವಾನಿ ಎಜ್ಯುಕೇಶನ್ ಟ್ರಸ್ಟ್, ಶ್ರೀ ಜ.ವಿ.ವ. ಸಂಘ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸದ್ಭಕ್ತರ ಸಹಯೋಗದೊಂದಿಗೆ ನಾಡದೇವಿಯ ನವರಾತ್ರಿ ಉತ್ಸವವನ್ನು ದಿನಾಂಕ 22-09-2025 ರಿಂದ 02-10-2025 ರಂದು ಇಂಡಿ ತಾಲೂಕಿನ ತಾಂಬಾ ಗ್ರಾಮದಲ್ಲಿ 2001 ಕುಂಭಮೇಳ, ಆನೆ ಕುದುರೆಗಳು ಸೃಷ್ಟಿ ಆರ್ಟ್ಸನ ಯಕ್ಷಗಾನ, ಲೇಝೀಮ ಕುಣಿತ, ನಾಶಿಕ ಡೋಲ, ಜಗ್ಗಲಿಗೆ ಮೇಳ, ಡಿ.ಜೆ ಸೌಂಡ ಸಿಸ್ಟಮ್, ಕೀಲು ಕುದುರೆ ಕುಣಿತ, ಬ್ರಾಸ್ ಬ್ಯಾಂಡ, ನವಿಲು ಕುಣಿತ, ಮಹಿಳಾ ಡೊಳ್ಳು ಕುಣಿತ ಸೇರಿದಂತೆ ಸಕಲ ವಾದ್ಯ ವೈಭವದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆಯು ಸಾಗುವುದಾಗಿ ತಿಳಿಸಿದರು.




