ವಿಜಯಪುರ ಜಿಲ್ಲೆಯ ಆಲಮೇಲ್ ಪೊಲೀಸ್ ಠಾಣೆಯ ಪ್ರಕರಣದಲ್ಲಿ ದಿನಾಂಕ: 20.11.2003 ರಂದು ದಾಖಲಾಗಿದ್ದ ಪ್ರಕರಣದ ಆರೋಪಿ ಆಜಾನ್ ಹುಸೇನ್ ಮುಜಾವರ ಸಾ: ವಾಗೋಲಿ ತಾ: ಮೋಹೊಳ ಜಿಲ್ಲಾ: ಸೊಲ್ಹಾಪೂರ ಮಹಾರಾಷ್ಟ್ರ, ಈತನಿಗೆ ಮಾನ್ಯ ಪ್ರಧಾನ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ, ತೀರ್ಪು ನೀಡಿತ್ತು. ಆದರೆ ಆರೋಪಿತನು ಮಾನ್ಯ ನ್ಯಾಯಾಂಗ ಬಂಧನದಲ್ಲಿದ್ದಾಗ, ವಿಜಯಪುರ ಕೇಂದ್ರ ಕಾರಾಗೃಹದಿಂದ ದಿನಾಂಕ: 25.03.2005 ರಂದು 10 ದಿನಗಳ ಪೆರೋಲ್ ರಜೆ ಪಡೆದು, ತನ್ನ ಊರಿಗೆ ಹೋಗಿದ್ದು, ಪೆರೋಲ್ ರಜೆ ಅವಧಿ ಮುಗಿದ ಮೇಲೆ ಮರಳಿ ಹಾಜರಾಗದೇ, ತಲೆಮರೆಸಿಕೊಂಡು ಹೋಗಿದ್ದ. ಈ ಬಗ್ಗೆ ಮಹಾರಾಷ್ಟ್ರ ರಾಜ್ಯದ ಸೋಲಾಪುರ ಜಿಲ್ಲೆಯ ಕಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದ್ದು. ಕಳೆದ 21 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಶಿಕ್ಷಾಬಂಧಿ ಆರೋಪಿತನ ಪತ್ತೆ ಕುರಿತು ವಿಜಯಪುರ ಎಸ್ಪಿ ಲಕ್ಷ್ಮಣ ನಿಂಬರಗಿ, ರಾಮನಗೌಡ ಹಟ್ಟಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ವಿಜಯಪೂರ ರವರ ಮಾರ್ಗದರ್ಶನದಲ್ಲಿ ಸೈಬರ್ ಕ್ರೈಂ ಪೊಲೀಸ್ ಠಾಣೆಯ ರವಿ ಯಡವನ್ನವರ ಪಿ.ಐ, ರಾಕೇಶ ಬಗಲಿ ಪಿ.ಎಸ್.ಐ ಹಾಗೂ ಸಿಬ್ಬಂದಿಗಳಾದ ಆಸೀಫ ಗುಡಗುಂಟಿ, ಎಮ್.ಕೆ. ಹಾವಡಿರವರನ್ನೊಳಗೊಂಡ ವಿಶೇಷ ತನಿಖಾ ತಂಡ ರಚಿಸಲಾಗಿದ್ದು, ಈ ವಿಶೇಷ ತಂಡವು ಆರೋಪಿತನ ಇರುವಿಕೆಯ ಬಗ್ಗೆ ಮಾಹಿತಿ ಕಲೆ ಹಾಕಿ, ದಿನಾಂಕ: 11.04.2026 ರಂದು ಮಹಾರಾಷ್ಟ್ರ ರಾಜ್ಯದ ಇಚಲಕರಂಜಿ ಪಟ್ಟಣದಲ್ಲಿ ವಶಕ್ಕೆ ಪಡೆದು, ನ್ಯಾಯಾಲಯಕ್ಕೆ ಹಾಜರುಪಡಿಸಿ, ಮರಳಿ ಕೇಂದ್ರ ಕಾರಾಗೃಹಕ್ಕೆ ಒಪ್ಪಿಸಿದ್ದಾರೆ. ಶಿಕ್ಷಾಬಂಧಿ ಆರೋಪಿತನ ಕುರಿತು ಮಾಹಿತಿ ಸಂಗ್ರಹಿಸಿ, ಆತನನ್ನು ಪತ್ತೆ ಹಚ್ಚಿ, ಬಂಧಿಸುವಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿದ ವಿಜಯಪುರ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿ ಜನರ ಕರ್ತವ್ಯವನ್ನು ಎಸ್ಪಿ ಲಕ್ಷ್ಮಣ ನಿಂಬರಗಿ ಶ್ಲಾಘಿಸಿದ್ದಾರೆ.




