ವಿಜಯಪುರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಪ್ರವಾಸೋದ್ಯಮ ಇಲಾಖೆ, ಮಹಾನಗರ ಪಾಲಿಕೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಇಂದು ನಗರದಲ್ಲಿ ಹಮ್ಮಿಕೊಂಡ ಸ್ವಚ್ಚತಾ ಹೀ ಸೇವಾ ಕಾರ್ಯಕ್ರಮದ “ಏಕ್ ದಿನ್, ಏಕ್ ಘಂಟಾ, ಏಕ್ ಸಾಥ (ಒಂದು ದಿನ, ಒಂದು ಘಂಟೆ, ಎಲ್ಲರೂ ಒಟ್ಟಿಗೆ)”ಎಂಬ ಘೋಷವ್ಯಾಖ್ಯದೊಂದಿಗೆ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಯಿತು.ವಿಜಯಪುರ ನಗರದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಹತ್ತಿರದ ಕೋಟೆಗೋಡೆ ಆವರಣದಲ್ಲಿ ಸ್ವಚ್ಛಗೊಳಿಸುವ ಮೂಲಕ ಅಭಿಯಾನಕ್ಕೆ ಜಿಲ್ಲಾಧಿಕಾರಿ ಡಾ. ಆನಂದ ಕೆ ಚಾಲನೆ ನೀಡಿದರು. ಐತಿಹಾಸಿಕ ಸ್ಮಾರಕಗಳನ್ನು ಹೊಂದಿರುವ ವಿಜಯಪುರ ಜಿಲ್ಲೆ ಪ್ರವಾಸೋದ್ಯಮದ ತಾಣವಾಗಿದೆ. ಐತಿಹಾಸಿಕ ಪರಂಪರೆಯನ್ನು ಹೊಂದಿರುವ ನಮ್ಮ ನಗರ, ಪಾರಂಪರಿಕ ತಾಣಗಳನ್ನು ಸಂರಕ್ಷಿಸುವುದು ಹಾಗೂ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಸ್ವಚ್ಛತಾ ಕಾರ್ಯ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಿರದೆ, ಸಾರ್ವಜನಿಕರ ಸಹಭಾಗಿತ್ವದಲ್ಲಿ ನಿರಂತರವಾಗಿ ನಡೆಯಬೇಕು. ಸಾರ್ವಜನಿಕರು ಕೋಟೆ ಗೋಡೆಯ ಅಕ್ಕಪಕ್ಕದಲ್ಲಿ ಕಸವನ್ನು ಚೆಲ್ಲದೇ ಸ್ವಚ್ಚತೆಯನ್ನು ಕಾಪಾಡಿಕೊಳ್ಳುವ ಮೂಲಕ ಸ್ವಚ್ಛತಾ ಅಭಿಯಾನಕ್ಕೆ ಕೈ ಜೋಡಿಸಬೇಕು. ಪಾರಂಪರಿಕ ಐತಿಹಾಸಿಕ ತಾಣಗಳ ಸೌಂದರ್ಯಕ್ಕೆ ಹಾನಿ ಉಂಟು ಮಾಡುವ ಕಾರ್ಯಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.




