ಎಸ್ಸಿಪಿ/ಟಿಎಸ್ಪಿ ಕಾಯ್ದೆಯಡಿ ನಿಗದಿತ ಅವಧಿಯಲ್ಲಿ ಯೋಜನೆಯ ಅನುದಾನ ಸಮರ್ಪಕವಾಗಿ ಬಳಕೆ ಮಾಡಿಕೊಂಡು ಅರ್ಹ ಫಲಾನುಭವಿಗಳಿಗೆ ಸೌಲಭ್ಯ ದೊರಕಿಸಲು ಸಂಬಂಧಿಸಿದ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಹಾಗೂ ಎಸ್ಸಿಪಿ/ಟಿಎಸ್ಪಿ ಸಭೆಗೆ ಅಧಿಕಾರಿಗಳು ಅಗತ್ಯ ಮಾಹಿತಿಯೊಂದಿಗೆ ಖುದ್ದು ಹಾಜರಿರಬೇಕು. ಯೋಜನೆಗೆ ನಿಗದಿ ಪಡಿಸಿದ ಅನುದಾನ ಲ್ಯಾಪ್ಸ್ ಆಗದಂತೆ ಕ್ರಿಯಾ ಯೋಜನೆ ರೂಪಿಸಿಕೊಂಡು ನಿಗದಿತ ಕಾಲಾವಧಿಯೊಳಗೆ ಆರ್ಥಿಕ ಮತ್ತು ಭೌತಿಕ ಗುರಿ ಸಾಧಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಸೂಚಿಸಿದರು.
ವಿಜಯಪುರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಿಶೇಷ ಘಟಕ ಯೋಜನೆಯ ಹಾಗೂ ಗಿರಿಜನ ಉಪಯೋಜನೆಯಡಿಯ ಕೇಂದ್ರ, ರಾಜ್ಯ ಹಾಗೂ ಜಿಲ್ಲಾ ವಲಯದ ಯೋಜನೆಗಳಡಿ ನಿಗದಿತ ಯೋಜನೆಗಳ ಪ್ರಗತಿ ಸಾಧಿಸಲು ಫಲಾನುಭವಿಗಳನ್ನು ಆಯ್ಕೆ ಮಾಡಿಕೊಂಡು, ಅತ್ಯಂತ ಜವಾಬ್ದಾರಿಯಿಂದ ಯೋಜನೆ ಅನುಷ್ಠಾನಗೊಳಿಸಬೇಕು. ಅರ್ಹ ಫಲಾನುಭವಿಗಳಿಗೆ ಯೋಜನೆಯ ಸೌಲಭ್ಯ ವಿಳಂಬವಾಗದೇ ತಲುಪಿಸಬೇಕು. ಯಾವುದೇ ಕಾರಣಕ್ಕೂ ಬಿಡುಗಡೆಯಾದ ಅನುದಾನ ಬಾಕಿ ಉಳಿಸಿಕೊಳ್ಳದೇ ಕಾರ್ಯನಿರ್ವಹಿಸಲು ಅವರು ಸೂಚನೆ ನೀಡಿದರು.




