
ನಿರಂತರ ಓದಿನಲ್ಲಿ ಯಶಸ್ಸಿನ ಗುಟ್ಟು ಅಡಗಿದೆ. ವಿದ್ಯಾರ್ಥಿಗಳು ಏಕಾಗ್ರತೆಯಿಂದ ಓದುವ ಮೂಲಕ ಗುರಿ ಸಾಧನೆಯೆಡೆಗೆ ಸಾಗುವುದರೊಂದಿಗೆ ಸತತ ಅಧ್ಯಯನ ಪರಿಶ್ರಮದ ಮೂಲಕ ಗುರಿ ತಲುಪಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಆನಂದ್ ಕೆ ಹೇಳಿದರು. ವಿಜಯಪುರ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ದಲಿತ ವಿದ್ಯಾರ್ಥಿ ಪರಿಷತ್ ರವರ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ವಿಷಯದ ಕುರಿತಾಗಿ ನಡೆದ ಒಂದು ದಿನದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು. ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಧೈರ್ಯದಿಂದ ಎದುರಿಸಬೇಕು. ಅದರಲ್ಲೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನಿರಂತರ ಓದು ಅಗತ್ಯ ಎಂಬುದರ ವಿದ್ಯಾರ್ಥಿಗಳು ಅರಿತುಕೊಳ್ಳಬೇಕು ಎಂದರು.

ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಅವರು ಮಾತನಾಡಿ. ಈ ರೀತಿಯ ಕಾರ್ಯಾಗಾರಗಳು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿಕೊಳ್ಳಲು ಪೂರಕವಾಗಿ ಸಹಾಯಕವಾಗಿವೆ. ಈ ದಿಸೆಯಲ್ಲಿ ವಿದ್ಯಾರ್ಥಿಗಳು ಕಾಲೇಜು,ವಿವಿಧ ವಸತಿ ನಿಲಯಗಳಲ್ಲಿನ ಗ್ರಂಥಾಲಯಗಳ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಾದ ಲಕ್ಷ್ಮಣ್ ನಿಂಬರಗಿ ಅವರು ಮಾತನಾಡಿ, ಜೀವನದಲ್ಲಿ ಸಾಧನೆ ಮಾಡುವ ಛಲದೊಂದಿಗೆ ಅಧ್ಯನಶೀಲತೆ ರೂಢಿಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ಪ್ರತಿನಿತ್ಯ ಅಧ್ಯಯನ ಕೈಗೊಳ್ಳಬೇಕು. ಆಯ್ಕೆಯ ವಿಷಯ ಕರಗತಗೊಂಡು ಸ್ಪರ್ಧಾತ್ಮಕ ಪರೀಕ್ಷೆಯನ್ನು ಅತ್ಯಂತ ಸಮರ್ಥವಾಗಿ ಎದುರಿಸಬಹುದಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕೆಎಎಸ್, ಐಎಎಸ್ ಪರೀಕ್ಷೆಗಳ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು. ಎಸ್ ಡಿ ವಿಜಡ್ಂನ ಸಂಸ್ಥಾಪಕ ಅಧ್ಯಕ್ಷರಾದ ಶರಣಯ್ಯ ಭಂಡಾರಿಮಠ ಅವರು ಸ್ಪರ್ಧಾತ್ಮಕ ಪರೀಕ್ಷಾ ಸಿದ್ಧತೆಯ ಕುರಿತಾಗಿ ಸಮಗ್ರ ವಿಷಯ ತಿಳಿಸಿಕೊಟ್ಟರು.
ವಿದ್ಯಾರ್ಥಿ ಪರಿಷತ್ ನ ರಾಜ್ಯಾಧ್ಯಕ್ಷರಾದ ಶ್ರೀನಾಥ್ ಪೂಜಾರಿ ,ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಮಹೇಶ್ ಪೋತದಾರ, ಉಮೇಶ್ ಲಮಾಣಿ, ಮಂಜು ಹಿರೇಮನಿ, ಅರವಿಂದ್ ಲಂಬು, ಮಾದೇಶ್ ,ಸದಾನಂದ ಬಡಿಗೇರ ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.



