ಖಾದಿ ಬಟ್ಟೆ ಸ್ವಾತಂತ್ರ್ಯ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಖಾದಿ ದೇಶಾಭಿಮಾನದ ಪ್ರತೀಕವಾಗಿದೆ. ಖಾದಿ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಉದ್ಯೋಗಾವಕಾಶ ಹೆಚ್ಚಿಸಿದೆ ಎಂದು ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ, ಮಸ್ಕಿ ಶಾಸಕ ಬಸನಗೌಡ ತುರವಿಹಾಳ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಸೋಮವಾರ ನಗರದ ಇಂಡಿ ರಸ್ತೆಯ ಚಾಂದಿನಿ ಫಂಕ್ಷನ್ ಹಾಲ್ನಲ್ಲಿ ಸೆ.8 ರಿಂದ 17ರವರೆಗೆ ಆಯೋಜಿಸಿದ ಖಾದಿ ಉತ್ಸವ-2025ರ ರಾಜ್ಯಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ರಾಜ್ಯದಲ್ಲಿ ಖಾದಿ ಉತ್ಪಾದನೆಗೆ ಇತಿಹಾಸವಿದೆ. ಖಾದಿ ನಮ್ಮ ಸ್ವಾಭಿಮಾನ-ಸ್ವಾವಲಂಬನೆಯ ಸಂಕೇತವಾಗಿದೆ. ವಿಶಿಷ್ಟ ಸ್ಥಾನ ಪಡೆದುಕೊಂಡಿರುವ ಖಾದಿ ಉತ್ಪಾದನೆ ಉತ್ತೇಜಿಸಲು ಇಂತಹ ಮಾರಾಟ ಮೇಳಗಳು ಸಹಕಾರಿಯಾಗಿವೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟ ಮೇಳಗಳಲ್ಲಿ ಭಾಗವಹಿಸಿ ಖಾದಿ ಉತ್ಪನ್ನಗಳನ್ನು ಖರೀದಿಸುವ ಮೂಲಕ ಪ್ರೋತ್ಸಾಹಿಸಬೇಕು. ಖಾದಿ ಮಂಡಳಿಯು ಕಳೆದ 65 ವರ್ಷ ಮೇಲ್ಪಟ್ಟು ಖಾದಿ ಕ್ಷೇತ್ರವಾದ ಹತ್ತಿ, ರೇಷ್ಮೆ, ನೂಲಿನಿಂದ ಚರಕದ ಮೂಲಕ ನೂಲು ತೆಗೆದು ಗ್ರಾಮೀಣರಿಂದ ವಸ್ತ್ರಗಳನ್ನು ಸಿದ್ಧಪಡಿಸಲು ಉತ್ತೇಜಿಸುತ್ತಾ ಬಂದಿದೆ. ಪ್ರಸ್ತುತ ಕರ್ನಾಟಕದಲ್ಲಿ 175ಕ್ಕೂ ಹೆಚ್ಚು ಸಂಘ-ಸಂಸ್ಥೆಗಳು ಖಾದಿ ಉತ್ಪಾದನೆಯಲ್ಲಿ ತೊಡಗಿಕೊಂಡು ಉದ್ಯೋಗ ನೀಡುವತ್ತಲೂ ಸಹಕಾರಿಯಾಗಿದೆ. ಖಾದಿ ಬಟ್ಟೆ ಧರಿಸುವುದರಿಂದ ಬಿಸಿಲಿನ ತಾಪದಿಂದ ತಣ್ಣನೆಯ ಅನುಭವ ಅನುಭವಿಸುವುದರಿಂದ ಇದು ಆರೋಗ್ಯದ ದೃಷ್ಟಿಯಿಂದಲೂ ಅನುಕೂಲವಾಗಿದೆ. ಖಾದಿ ಮತ್ತು ಗ್ರಾಮೋದ್ಯೋಗ ಉತ್ಪನ್ನಗಳ ಮಾರಾಟಕ್ಕಾಗಿ ಹಾಗೂ ಪ್ರಚಾರಕ್ಕಾಗಿ ರಾಜ್ಯಮಟ್ಟದ, ವಲಯ ಮಟ್ಟದ ಮತ್ತು ರಾಷ್ಟ್ರ ಮಟ್ಟದ ವಸ್ತುಪ್ರದರ್ಶನ ಕಾರ್ಯಕ್ರಮಗಳನ್ನು ಮಂಡಳಿ ಹಮ್ಮಿಕೊಳ್ಳುತ್ತಿದೆ. ಗ್ರಾಮೀಣ ಭಾಗದ ಕುಶಲ ಕರ್ಮಿಗಳು ಹಾಗೂ ಸಂಸ್ಥೆಗಳಿಗೆ ಉತ್ತೇಜನ ನೀಡಿ ಹೆಚ್ಚಿನ ಉದ್ಯೋಗಾವಕಾಶವನ್ನು ಕಲ್ಪಿಸಲು ಇಂತಹ ಪ್ರದರ್ಶನ ಹಾಗೂ ಮಾರಾಟ ಮೇಳಗಳು ಸಹಕಾರಿಯಾಗಿವೆ. ಖಾದಿ ಮತ್ತು ಗ್ರಾಮೋದ್ಯೋಗ ಕ್ಷೇತ್ರದಡಿಯಲ್ಲಿ ದುಡಿಯುವ ಸಾವಿರಾರು ಗ್ರಾಮೀಣ ಕೈಗಾರಿಕೆಗಳಿಗೆ ನಿರಂತರ ಕೆಲಸ ದೊರೆಯಲು ಖಾದಿ ಮತ್ತು ಗ್ರಾಮೋದ್ಯೋಗ ಉತ್ಪನ್ನಗಳು ಮಾರಾಟವಾಗಬೇಕೆಂಬ ದೃಷ್ಟಿಯಿಂದ ರಾಜ್ಯದಾದ್ಯಂತ 10 ಜಿಲ್ಲೆಗಳಲ್ಲಿ ರಾಜ್ಯ ಮಟ್ಟದ ಖಾದಿ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ. ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಖಾದಿ ಬಟ್ಟೆ ಖರೀದಿಸಲು ಒಲವು ವ್ಯಕ್ತವಾಗಿದ್ದು, ಇಂದಿನ ಯುವಕರಿಗೆ ನಮ್ಮ ಸಂಸ್ಕೃತಿ ಪರಂಪರೆ ತಿಳಿಸಿಕೊಡುವ ಅವಶ್ಯಕತೆ ಇದೆ. ಸ್ವಾತಂತ್ರ್ಯ ಚಳುವಳಿಯಲ್ಲಿ ಸ್ವದೇಶಿತನದ ಸಂಕೇತವಾದ ಖಾದಿ ಬಟ್ಟೆ ಉದ್ಯಮಕ್ಕೆ ಬಲಪಡಿಸಬೇಕಾದರೆ ಇಂದಿನ ಯುವಕರು ಹೆಚ್ಚೆಚ್ಚು ಖಾದಿ ಬಟ್ಟೆ ಒಲವು ಹೊಂದಬೇಕು ಎಂದು ಕರೆ ನೀಡಿದರು.

ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷರಾದ ಸಂಗಮೇಶ ಬಬಲೇಶ್ವರ ಅವರು ಮಾತನಾಡಿ, ಖಾದಿ ನಮ್ಮ ದೇಶದ ಅಸ್ಮಿತೆಯಾಗಿದೆ. ಖಾದಿ ಉತ್ಸವ ಮನೆ-ಮನಗಳ ಉತ್ಸವವಾಗಬೇಕು, ಅಂದಾಗ ಈ ಉತ್ಸವದ ಸಾರ್ಥಕತೆ ಸಾಕಾರಗೊಳ್ಳುತ್ತದೆ. ಯುವಕರು ಖಾದಿಯ ಬಗ್ಗೆ ಒಲವು ಹೊಂದಿ ಖಾದಿ ಬಟ್ಟೆ ಬಳಸಬೇಕು. ಅಂತರಾಷ್ಟ್ರೀಯ ಮಟ್ಟದಲ್ಲಿ ಖಾದಿ ಉತ್ಪನ್ನಕ್ಕೆ ಬ್ರಾಂಡ್ ಸಿಗುವಂತಾಗಿ ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಗುಡಿ-ಕೈಗಾರಿಕೆ ಹಾಗೂ ಉದ್ಯಮಕ್ಕೆ ಬೆಂಬಲ ದೊರಕಬೇಕು. ಈ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಖಾದಿ ಉತ್ಪನ್ನಗಳನ್ನು ಖರೀದಿಸುವ ಮೂಲಕ ಪೋತಾಹ ನೀಡಬೇಕು ಎಂದು ಹೇಳಿದರು.



