ದಿನಾಂಕ : 30.04.2025 ರಂದು ಗಾಲೀಬ ಚನ್ನವಿರಪ್ಪ ಹಡಪದ, ಸಾ.ಆಲಮೇಲ್ ರವರು ಆಲಮೇಲ್ ಠಾಣೆಗೆ ಹಾಜರಾಗಿ ಯಾರೋ ಕಳ್ಳರು ಕಳ್ಳತನ ಮಾಡುವ ಉದ್ದೇಶದಿಂದ ದಿನಾಂಕ: 29.04.2025 ರಂದು ರಾತ್ರಿ 10.00 ಗಂಟೆಯಿಂದ ದಿನಾಂಕ: 30.04.2025 ರಂದು ಬೆಳಿಗ್ಗೆ 06.00 ಗಂಟೆಯ ನಡುವಿನ ವೇಳೆಯಲ್ಲಿ ಮನೆಯ ಬಾಗಿಲು ಮುರಿದು ಒಳಗಡೆ ಇರುವ ಟ್ರೇಜರಿಯಲ್ಲಿಟ್ಟಿದ್ದ ಬೆಳ್ಳಿ ಮತ್ತು ಬಂಗಾರದ ಆಭರಣ ಹಾಗೂ ಹಣ ಸೇರಿ ಒಟ್ಟು 6,07,500 ರೂ ಕಳ್ಳತನ ಮಾಡಿದ್ದು, ಅಲ್ಲದೆ ಮಂಜುನಾಥ ಗುರುಶಾಂತಪ್ಪ ಬೊಗೊಂಡಿ ಮನೆಯ ಬಾಗಿಲಿಗೆ ಹಾಕಿದ್ದ ಕೀಲಿ ಮುರಿದು ಮನೆಯ ಟ್ರೇಜರಿಯಲ್ಲಿಟ್ಟಿದ್ದ ಬೆಳ್ಳಿ ಮತ್ತು ಬಂಗಾರದ ಆಭರಣ ಹಾಗೂ ಹಣ ಸೇರಿ ಒಟ್ಟು 2,05,000ರೂ ಕಳ್ಳತನ ಮಾಡಿದ್ದು ಮತ್ತು ರಾಜಕುಮಾರ ತಂದೆ ನಾಗಪ್ಪ ಕೊಣಶಿರಸಗಿ ರವರ ಮನೆಯ ಬಾಗಿಲಿಗೆ ಹಾಕಿದ್ದ ಕೀಲಿ ಮುರಿದು ಟ್ರೇಜರಿಯಲ್ಲಿಟ್ಟಿದ್ದ ಬೆಳ್ಳಿ ಮತ್ತು ಬಂಗಾರದ ಆಭರಣ ಹಾಗೂ ಹಣ ಸೇರಿ ಒಟ್ಟು 2,47,000ರೂ ಕಳ್ಳತನ ಮಾಡಿದ್ದು, ಹೀಗೆ ಎಲ್ಲವು ಸೇರಿ ಒಟ್ಟು 10,69,500 ರೂ. ಮೌಲ್ಯದ ಬೆಳ್ಳಿ, ಬಂಗಾರ ಹಾಗೂ ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಈ ಕುರಿತು ಆಲಮೇಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಐಪಿಎಸ್ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮನಗೌಡ ಹಟ್ಟಿ, ಇಂಡಿ ಡಿಎಸ್ಪಿ ಜಗದೀಶ ಎಚ್.ಎಸ್ ಹಾಗೂ ಸಿಂದಗಿ ಸಿಪಿಐ ನಾನಾಗೌಡ ಪೊಲೀಸ್ ಪಾಟೀಲ ಮಾರ್ಗದರ್ಶನದಲ್ಲಿ ಆಲಮೇಲ್ ಠಾಣೆಯ ಅರವಿಂದ ಅಂಗಡಿ, ಎಸ್.ಎಮ್. ಪಡಶೆಟ್ಟಿ ಪಿಎಸ್ಐ ಹಾಗೂ ಸಿಬ್ಬಂದಿ ಎಚ್.ಟಿ.ಗೋಡೆಕಾರ, ಸಲೀಮ ಸವದಿ, ಸಿದ್ರಾಯ ಪಾಟೀಲ, ಎಸ್.ಬಿ.ಯತ್ನಾಳ, ವ್ಹಿ.ಎಸ್.ಆಳೂರ, ಎಸ್.ಎಸ್.ಜಾಲಗೇರಿ, ಬಿ.ಎಸ್.ಮೇಡೆದಾರ, ಬಿ.ಜಿ.ಕ್ಷತ್ರಿ ರವರನ್ನೊಳಗೊಂಡ ತನಿಖಾ ತಂಡವನ್ನು ರಚಿಸಿ ಪ್ರಕರಣದಲ್ಲಿ ವೈಜ್ಞಾನಿಕ ವಿಧಾನದಿಂದ ತನಿಖೆ ಮಾಡಿ. ಪ್ರಕರಣದ ಆರೋಪಿಗಳಾದ ಶರಣಬಸು ಮಾಹಾದೇವ ಜಾಲವಾದ, ಪ್ರಕಾಶ ನಿಂಗಪ್ಪ ಕಂಬಾರ, ಇಬ್ಬರೂ ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ಚಿಕ್ಕರೂಗಿ ಇವರುಗಳನ್ನು ಬಂಧಿಸಿ . ಆರೋಪಿತರಿಂದ ಅಂದಾಜು ಒಟ್ಟು 86 ಗ್ರಾಂ. ಬಂಗಾರದ ಆಭರಣಗಳು (ಅಂದಾಜು ಮೌಲ್ಯ: 8,60,000/-), 67 ಗ್ರಾಂ ಬೆಳ್ಳಿ ಆಭರಣಗಳನ್ನು (ಅಂದಾಜು ಮೌಲ್ಯ: 67,000/-) ಹಾಗೂ 05 ಮೋಟರ್ ಸೈಕಲ್ಗಳನ್ನು (ಅಂದಾಜು ಮೌಲ್ಯ: 1,25,000/-) ಹೀಗೆ ಒಟ್ಟು 10,52,000/- ಮೌಲ್ಯದ ಬಂಗಾರ, ಬೆಳ್ಳಿ ಹಾಗೂ ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಸದರಿ ಪ್ರಕರಣದ ಆರೋಪಿತರನ್ನು ಪತ್ತೆ ಹಚ್ಚಿ, ಉತ್ತಮ ಕರ್ತವ್ಯ ನಿರ್ವಹಿಸಿದ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿ ಜನರ ಕರ್ತವ್ಯವನ್ನು ಎಸ್ಪಿ ನಿಂಬರಗಿ ಶ್ಲಾಘಿಸಿದ್ದಾರೆ.




