ವಿಜಯಪುರದಲ್ಲಿ ಬ್ಯಾಂಕ್ ದರೋಡೆಕೋರ ಅಟ್ಟಹಾಸಕ್ಕೆ ಜನರು ಬೆಚ್ಚಿ ಬಿದ್ದಿದ್ದಾರೆ. ಕಳೆದ ಮೂರು ತಿಂಗಳ ಹಿಂದಷ್ಟೇ ಮನಗೂಳಿ ಪಟ್ಟಣದ ಕೆನರಾ ಬ್ಯಾಂಕಿನಲ್ಲಿ 59 ಕೆ.ಜಿ ಚಿನ್ನ ದರೋಡೆಯಾಗಿತ್ತು. ಈ ಪ್ರಕರಣ ಪತ್ತೆ ಆಯ್ತು ಅಂತಾ ಪೊಲೀಸರು ನಿಟ್ಟುಸಿರು ಬಿಡುವಾಗಲೇ ಭೀಮಾತೀರದಲ್ಲಿ ಮತ್ತೊಂದು ಬಿಗ್ ಬ್ಯಾಂಕ್ ರಾಬರಿ ನಡೆದಿದೆ. ಸಾಯಂಕಾಲ ಚಡಚಣ ಪಟ್ಟಣದ ಹೃದಯಭಾಗದಲ್ಲಿರೋ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿಗೆ ನುಗ್ಗಿದ ಮುಸುಕುಧಾರಿಗಳು ಗನ್ ತೋರಿಸಿ ಬ್ಯಾಂಕ್ ಮ್ಯಾನೇಜರ್ ಸಹಿತವಾಗಿ ಸಿಬ್ಬಂದಿಗಳನ್ನ ಬೆದರಿಸಿದ್ದಾರೆ. ಬಳಿಕ ಎಲ್ಲರನ್ನ ಒಂದು ರೂಂನಲ್ಲಿ ಕೂಡಿಹಾಕಿ ಹಗ್ಗದಿಂದ ಕಟ್ಟಿದ್ದಾರೆ. ಬಳಿಕ ಬ್ಯಾಂಕ್ ಲಾಕರಿನಲ್ಲಿದ್ದ ಅಪಾರ ಪ್ರಮಾಣದ ಚಿನ್ನ, ಕೋಟ್ಯಾಂತರ ರೂಪಾಯಿ ಹಣವನ್ನ ಒಂದು ಚೀಲಕ್ಕೆ ತುಂಬಿಕೊಂಡು ಪರಾರಿಯಾಗಿದ್ದಾರೆ. ಬ್ಯಾಂಕಿನಲ್ಲಿ ಇಷ್ಟೇಲ್ಲ ಸಿನಿಮೀಯ ರೀತಿಯ ದರೋಡೆ ನಡೆಯುತ್ತಿದ್ದರು, ಹೊರಗೆ ಗ್ರಾಹಕರಿಗೆ ಗೊತ್ತೆ ಆಗಿಲ್ಲ ಎನ್ನಲಾಗಿದೆ. ಬಳಿಕ ಹಗ್ಗ ಬಿಚ್ಚಿಕೊಂಡು ಸಿಬ್ಬಂದಿಯೊಬ್ಬ ಹೊರಗೆ ಬಂದಾಗಲೇ ಗೊತ್ತಾಗಿದೆ ಎನ್ನಲಾಗಿದೆ. ಇನ್ನೂ ಅಂದಾಜು 1 ಕೋಟಿ ಹಣ, 15 ಕೆ.ಜಿಯಷ್ಟು ಚಿನ್ನ ದರೋಡೆಯಾಗಿದೆ ಎನ್ನಲಾಗ್ತಿದೆ. ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲೆಯ ಖಾಕಿ ಪಡೆಯೇ ಚಡಚಣದತ್ತ ದೌಡಾಯಿಸಿದೆ. ಶ್ವಾನದಳದಿಂದಲೂ ಬ್ಯಾಂಕಿನಲ್ಲಿ ಪರಿಶೀಲನೆ ನಡೆಸಲಾಗಿದೆ. ಇತ್ತ ರಾಬರಿ ಬಳಿಕ ದರೋಡೆಕೋರರ ಗುಂಪು ಮಹಾರಾಷ್ಟ್ರದಲ್ಲಿ ಚದುರಿದೆ. ಈ ಪೈಕಿ KA24 DH 2456 ನಂಬರಿನ ಒಂದು ಮಾರುತಿ ಇಕೋ ವಾಹನ ಸೊಲ್ಲಾಪುರ ಜಿಲ್ಲೆಯ ಮಂಗಳವೇಡ ತಾಲೂಕಿನ ಹುಲಿಜಂತಿ ಗ್ರಾಮದ ಬಳಿ ಪತ್ತೆಯಾಗಿದೆ. ಪೊಲೀಸರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಕುರಿಗಳಿಗೆ ಇಕೋ ವಾಹನವನ್ನ ಡಿಕ್ಕಿ ಹೊಡೆಸಿದೆ. ಈ ವೇಳೆ ಸ್ಥಳೀಯರು ವಾಹನಕ್ಕೆ ಗೇರಾವ್ ಹಾಕ್ತಿದ್ದಂತೆ ವಾಹನ ಅಲ್ಲಿಯೇ ಬಿಟ್ಟು ಹಣ, ಚಿನ್ನಾಭರಣ ಜೊತೆಗೆ ಗ್ಯಾಂಗ್ ಪರಾರಿಯಾಗಿದೆ ಎನ್ನಲಾಗಿದೆ. ವಾಹನವನ್ನ ಮಂಗಳವೇಡ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನೂ ಚಡಚಣ ಪೊಲೀಸರು ಮಂಗಳವೇಡ ಪೊಲೀಸ್ ಠಾಣೆಗೆ ಭೇಟಿ ನೀಡಿ ದರೋಡೆಕೋರರ ಬಂಧನಕ್ಕೆ ಬಲೆ ಬೀಸಿದ್ದಾರೆ.




