ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ವಿರುದ್ಧ ಕೊಪ್ಪಳ ನಗರ ಠಾಣೆಯಲ್ಲಿ ಪರಿಶಿಷ್ಟರ ಮೇಲಿನ ದೌರ್ಜನ್ಯ ನಿಷೇಧ ಕಾಯ್ದೆಯಡಿ ದಾಖಲಾಗಿದ್ದ ಎಫ್ಐಆರ್ಗೆ ಹೈಕೋರ್ಟ್ ಬುಧವಾರ ತಡೆಯಾಜ್ಞೆ ನೀಡಿದೆ. ಬಿಜೆಪಿ ಉಚ್ಛಾಟಿತ ಶಾಸಕ ಯತ್ನಾಳ್ ವಿರುದ್ಧ ದಾಖಲಾಗಿದ್ದ ಪ್ರಕರಣಕ್ಕೆ ತಡೆ ಕೋರಿ ಹೈಕೋರ್ಟ್ಗೆ ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿ ಎಂ.ಐ. ಅರುಣ್ ಅವರಿದ್ದ ಏಕಸದಸ್ಯ ಪೀಠವು ಆದೇಶಕ್ಕೂ ಮುನ್ನ ನ್ಯಾಯಾಲಯದ ಸಭಾಂಗಣದಲ್ಲೇ ಮೊಬೈಲ್ನಲ್ಲಿ ಯತ್ನಾಳ ಹೇಳಿಕೆಯ ವಿಡಿಯೋ ಆಲಿಸಿದ ಅಪರೂಪದ ಘಟನೆ ಕೂಡ ನಡೆಯಿತು. “ಸನಾತನ ಧರ್ಮದವರು ಮಾತ್ರ ದಸರಾದಲ್ಲಿ ಚಾಮುಂಡಿ ದೇವಿಗೆ ಹೂವು ಮುಡಿಸಬೇಕು ಹೊರತು ದಲಿತ ಮಹಿಳೆಗೂ ಇದಕ್ಕೆ ಅವಕಾಶವಿಲ್ಲ” ಎಂದು ತಿರುಚಿದ ವಿಡಿಯೊವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ ಎಂದು ಅರ್ಜಿದಾರರ ಪರ ಹಿರಿಯ ವಕೀಲ ವೆಂಕಟೇಶ್ ದಳವಾಯಿ ವಾದಿಸಿದರು. ಅಲ್ಲದೇ ಯತ್ನಾಳ್ ನೀಡಿದ ಹೇಳಿಕೆಯ ವಿಡಿಯೊವನ್ನು ಪೆನ್ಡ್ರೈವ್ನಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಆದಾಗ್ಯೂ ನ್ಯಾಯಪೀಠ ಅನುಮತಿ ನೀಡಿದರೆ ಇಲ್ಲಿಯೇ ವಿಡಿಯೊ ಪ್ರದರ್ಶಿಸಿ, ಹೇಳಿಕೆಯ ಸತ್ಯಾಸತ್ಯತೆ ಮುಂದಿರಿಸುತ್ತೇನೆ ಎಂದು ಕೋರಿದರು. ನಂತರ ಹೆಚ್ಚುವರಿ ಅಡ್ವಕೇಟ್ ಜನರಲ್ ಹಾಗೂ ದಳವಾಯಿ ಅವರನ್ನು ಹತ್ತಿರ ಕರೆಸಿಕೊಂಡ ನ್ಯಾಯಪೀಠವು ವಿಡಿಯೊ ಆಲಿಸಿತು. ವಿಡಿಯೊ ಆಲಿಸಿದ ಬಳಿಕ ಯತ್ನಾಳ ವಿರುದ್ಧ ಯಾವುದೇ ಕ್ರಮಕೈಗೊಳ್ಳದಂತೆ ಎಫ್ಐಆರ್ಗೆ ತಡೆ ನೀಡಿ, ಆದೇಶಿಸಿ, ಅರ್ಜಿ ವಿಲೆಗೊಳಿಸಿತು.
ದೂರಿನಲ್ಲಿ ಏನಿದೆ? : ಶಾಸಕ ಯತ್ನಾಳ ವಿರುದ್ಧ ಕೊಪ್ಪಳ ನಗರ ಠಾಣೆಯಲ್ಲಿ ಮಂಗಳವಾರ ರಾತ್ರಿ ಮಲ್ಲಿಕಾರ್ಜುನ ಪೂಜಾರ್ ಎಂಬುವವರು ಎಸ್.ಸಿ.,ಎಸ್.ಟಿ. ದೌರ್ಜನ್ಯ ನಿಗ್ರಹ ಕಾಯ್ದೆಯಡಿ ದೂರು ದಾಖಲಿಸಿದ್ದರು. ಶಾಸಕ ಯತ್ನಾಳ ದಲಿತ ಮಹಿಳೆಯರಿಗೆ ಮೈಸೂರು ದಸರಾ ಉದ್ಘಾಟಿಸುವ ಅವಕಾಶ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ ಎಂದು ದೂರಲಾಗಿತ್ತು. ಅಲ್ಲದೇ ಯತ್ನಾಳ ರಾಜ್ಯದ ಮೂಲೆಮೂಲೆಗಳಲ್ಲಿ ಕೋಮು ಸಂಘರ್ಷಕ್ಕೆ ಕಾರಣವಾಗುವ ಹೇಳಿಕೆಗಳನ್ನು ನೀಡುತ್ತಾರೆ ಎಂದು ಆರೋಪಿಸಲಾಗಿತ್ತು.



